ಹರಪನಹಳ್ಳಿಯಲ್ಲಿ ನ್ಯಾ. ಉಂಡಿ ಮಂಜುಳ
ಹರಪನಹಳ್ಳಿ, ಮಾ.24- ಸಕಲ ಜೀವಿಗಳು ಬದುಕಲು ಅಗತ್ಯವಾಗಿರುವ ಜೀವ ಜಲವನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಜಲ ದಿನಾಚರಣೆಯಲ್ಲಿ ಕಾನೂನು ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನೀರನ್ನು ಹೆಚ್ಚು ಹೆಚ್ಚು ಪೋಲು ಮಾಡುವ ಬದಲು ಹಿತ ಮಿತವಾಗಿ ಬಳಕೆ ಮಾಡಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು ಎಂದು ತಿಳಿ ಹೇಳಿದರು. ಗಿಡಮರಗಳ ಮಾರಣಹೋಮದಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮುಂದೊಂದು ದಿನ ಹನಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗುವ ಸಾಧ್ಯತೆ ಹೆಚ್ಚಾಗಲಿದೆ ಎಂದರು.
ಅಂತಸ್ತು, ಐಷಾರಾಮಿ ಜೀವನ, ಬಂಗಾರ, ಬ್ಯಾಂಕಿನಲ್ಲಿ ಕೋಟಿ ಕೋಟಿ ಹಣ ಇದ್ದವರು ಶ್ರೀಮಂತರಲ್ಲ ಶುದ್ಧ ಗಾಳಿ, ನೀರು, ಆಹಾರ ಸೇವಿಸುವವರೇ ನಿಜವಾದ ಶ್ರೀಮಂತರು. ಪರಿಸರ ಸ್ನೇಹಿಗಳಾಗಿ ಜೊತೆಗೆ ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಿ. ಬೇಸಿಗೆಯಲ್ಲಿ ಅವುಗಳಿಗೆ ಒಂದು ಹಿಡಿ ಧಾನ್ಯ ಹಾಕಿ ನೀರನ್ನು ಉಣಿಸುವ ಮೂಲಕ ಮಾನವೀಯತೆ ಮೆರೆಯಿರಿ ಎಂದು ಕರೆ ನೀಡಿದರು.
ಪುರಸಭೆಯ ಕಛೇರಿ ವ್ಯವಸ್ಥಾಪಕ ಅಶೋಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಪರ ಸರ್ಕಾರಿ ವಕೀಲರಾದ ಮಂಜುನಾಥ್ ಕಣಿವಿಹಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಿವಿಲ್ ಕಿರಿಯ ನ್ಯಾಯಾಧೀಶೆ ಬಿ.ಜಿ.ಶೋಭಾ, ಪುರಸಭೆ ಅಧ್ಯಕ್ಷ ಮಂಜುನಾಥ್ ಇಜಂತಕರ್, ಪುರಸಭೆ ಮುಖ್ಯಾಧಿಕಾರಿ ಬಿ.ಆರ್. ನಾಗರಾಜ್ ನಾಯ್ಕ, ಸದಸ್ಯರಾದ ಅಬ್ದುಲ್ ರೆಹಮಾನ್ ಸಾಬ್, ಟಿ. ವೆಂಕಟೇಶ್, ಸತ್ತೂರು ಎಲ್ಲಮ್ಮ, ಎಸ್. ತಾರಾ ಉಪಸ್ಥಿತರಿದ್ದರು.
ಎಂ. ಮೃತ್ಯುಂಜಯ, ಎಸ್.ಎಂ. ರುದ್ರಮುನಿ, ಶ್ರೀನಿವಾಸ್, ವಕೀಲರ ಸಂಘದ ಕಾರ್ಯದರ್ಶಿ ಬಸವರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಪಿ. ಮಂಜುನಾಥ, ಸಮುದಾಯ ಸಂಘಟನಾಧಿಕಾರಿ ಸಿ. ಲೋಕ್ಯಾನಾಯ್ಕ, ಇಂಜಿನಿಯರ್ ಪ್ರಭು ಬಿರಾದಾರ್, ಆರ್. ಓ. ಸವಿತಾ, ಜಬೀಲ್, ಚನ್ನಬಸಪ್ಪ, ಕೌಟಿ ವಾಗೀಶ್, ನಾಮನಿರ್ದೇಶಿತ ಸದಸ್ಯರಾದ ಎಂ. ರುದ್ರಪ್ಪ, ಬಿದ್ದಪ್ಪ, ಅಮಾನುಲ್ಲಾ, ತಿಮ್ಮಪ್ಪ, ಬಸವರಾಜ್, ಬಾಗಳಿ ಹೆಚ್. ಕೊಟ್ರೇಶ್ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಹಾಗೂ ಕೋರ್ಟ್ ಸಿಬ್ಬಂದಿಗಳು ಹಾಜರಿದ್ದರು.