ಜಗಳೂರು, ಮಾ. 15 – `ದುಡಿಯೋಣ ಬಾ’ ಆಂದೋಲನ ದಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿ (ಮನರೇಗಾ) ಕೂಲಿ ಕಾರ್ಮಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿ.ಪಂ ಅಧ್ಯಕ್ಷೆ ಶಾಂತಕುಮಾರಿ ಹೇಳಿದರು.
ತಾಲ್ಲೂಕಿನ ಬಿದರಕೆರೆ ಗ್ರಾಮದಲ್ಲಿ ಗ್ರಾ.ಪಂ ವತಿಯಿಂದ ಹಮ್ಮಿಕೊಂಡಿದ್ದ `ದುಡಿಯೋಣ ಬಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ತಾಲೂಕಿನಲ್ಲಿ ಬೇಸಿಗೆ ಸಮಯದಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಆರ್ಥಿಕ ಸಂಕಷ್ಟ ನೀಗಿಸಲು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಆರಂಭದ ಖರ್ಚು ವೆಚ್ಚ ಭರಿಸಲು ಪೂರಕವಾಗಿ ಸರ್ಕಾರ ವಿನೂತನ ಕಾರ್ಯಕ್ರಮದ ಮೂಲಕ ಮನರೇಗಾ ಯೋಜನೆ ಸಮರ್ಪಕವಾಗಿ ಜಾರಿ ಗೊಳಿಸಿ ಉದ್ಯೋಗ ಕಲ್ಪಿಸುತ್ತಿದೆ.
ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿ.ಪಂ ಉಪ ಕಾರ್ಯದರ್ಶಿ ಆನಂದ್ ಮಾತನಾಡಿ, ಇಂದಿನಿಂದ ಜೂನ್ 15 ರವರೆಗೆ ಮೂರು ತಿಂಗಳು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಗ್ರಾಮಗಳಲ್ಲಿ ಕರಪತ್ರದೊಂದಿಗೆ ಜಾಗೃತಿ ಮೂಡಿಸಿ ಸಮರ್ಪಕವಾಗಿ ಮನರೇಗಾ ಕಾಮಗಾರಿ ನೀಡಲಾಗುತ್ತದೆ ಎಂದರು.
ಪ್ರತಿ ಸೋಮವಾರ ಗ್ರಾ.ಪಂ ಕೇಂದ್ರದಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮನರೇಗಾ ಕೂಲಿ ಕಾರ್ಮಿಕರ ಬೇಡಿಕೆ ಪಟ್ಟಿ ಸ್ವೀಕರಿಸಲಾಗುವುದು ಹಾಗೂ ಜಾಬ್ ಕಾರ್ಡ್ ಪಡೆದ ಎರಡು-ಮೂರು ದಿನಗಳಲ್ಲಿಯೇ ಕಾಮಗಾರಿ ಕೆಲಸ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು. ಇದೇ ವೇಳೆ 4 ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಿದರು ಹಾಗೂ ಸ್ವಸಹಾಯ ಸಂಘಗಳಿಂದ 38 ಜನ ಕೂಲಿ ಕಾರ್ಮಿಕರ ಕೂಲಿ ಕೆಲಸದ ಬೇಡಿಕೆ ಪಡೆಯಲಾಯಿತು. ಮನೆ-ಮನೆಗೆ ತೆರಳಿ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಬಸವರಾಜ್, ಜಿ.ಪಂ ಇಓ ಸಮನ್ವಯಾಧಿಕಾರಿ ಚಂದನ್, ತಾ.ಪಂ ಇಓ ಮಲ್ಲನಾಯ್ಕ, ಗ್ರಾ.ಪಂ ಅಧ್ಯಕ್ಷೆ ಶಿವಲಿಂಗಮ್ಮ, ಉಪಾಧ್ಯಕ್ಷ ಮುನಿಯಪ್ಪ, ಪಿಡಿಓ ಮರುಳಸಿದ್ದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.