ಹರಿಹರ ಜನಸ್ಪಂದನ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ

ಹರಿಹರ, ಮಾ. 13- ತುಂಗಭದ್ರಾ ನದಿ ಮರಳು ಅಕ್ರಮ ಸಾಗಾಟಕ್ಕೆ ಕಡಿವಾಣವಿಲ್ಲ, ಹಂದಿ ಹಾವಳಿ, ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆಗೆ ಆದ್ಯತೆ ಇಲ್ಲ , ಯುಜಿಡಿ ಕಳಪೆ ಕಾಮಗಾರಿ, ಹಕ್ಕುಪತ್ರ ನೀಡಿಲ್ಲ  ಇತ್ಯಾದಿ ಸಮಸ್ಯೆಗಳ ಕುರಿತು ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರು  ಶಾಸಕ ಎಸ್. ರಾಮಪ್ಪನವರ ಬಳಿ ಹೇಳಿಕೊಂಡರು.

ಈ ವೇಳೆ ಮಾತನಾಡಿದ ಎಸ್. ರಾಮಪ್ಪ ನಗರಸಭೆಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ತಮಗೆ ವಹಿಸಿರುವ ಕರ್ತವ್ಯವನ್ನು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಅನೇಕ ಸಾರ್ವಜನಿಕರು ತಮ್ಮ ಬಳಿ ನೋವನ್ನು ತೋಡಿಕೊಂಡಿದ್ದರಿಂದಾಗಿ ಇಂದು ಜನಸ್ಪಂದನ ಸಭೆಯನ್ನು ಆಯೋಜಿಸುವ ವ್ಯವಸ್ಥೆ ಮಾಡಲಾಗಿದೆ. ಆಧಿಕಾರಿಗಳಲ್ಲಿ ಇಚ್ಚಾಶಕ್ತಿ ಕೊರತೆ ಬಹಳ ದೊಡ್ಡ ಪ್ರಮಾಣದಲ್ಲಿ ಕಂಡುಬಂದಿರುವುದನ್ನು ಕಾಣುತ್ತಿದ್ದೇವೆ. ಇದನ್ನು  ಬಿಟ್ಟು ನಗರದ ಅಭಿವೃದ್ಧಿಗೆ ಪೂರಕವಾಗಿ ತಮ್ಮ ಕರ್ತವ್ಯ ನಿಭಾಯಿಸಿ ಎಂದು ಹೇಳಿದರು.

 ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳ ವರ್ತನೆಯನ್ನು ನೋಡಿ  ನಗರ ಗಬ್ಬೆದು ನಾರುವಂತಾಗಿದೆ ಕೆಲಸ ಮಾಡುವುದಕ್ಕೆ ಆದರೆ ಮಾಡಿ. ಇಲ್ಲದೆ ಹೋದರೆ ಮನೆಗಳಿಗೆ ಹೋಗಿ ಎಂದು ಮಾತಿನ ಛಾಟಿ ಬೀಸಿದರು. ನಗರದ ಯಾವುದೇ ಸಮಸ್ಯೆಗಳನ್ನು ಸಾರ್ವಜನಿಕರು ತಂದಾಗ ಅದನ್ನು ವಿಳಂಬವನ್ನು ಮಾಡದೆ ಮತ್ತು ಕಚೇರಿಗೆ ಅಲೆದಾಡುವಂತೆ ಮಾಡದೆ ಬೇಗನೆ ಕೆಲಸವನ್ನು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 ನಗರದಲ್ಲಿ ನಡೆಯುತ್ತಿರವ ಯುಜಿಡಿ ಕಳಪೆ ಕಾಮಗಾರಿಯ ಬಗ್ಗೆ ಅನೇಕ ಜನರು ದೂರನ್ನು ಹೇಳಿದ್ದರಿಂದ ಆಕ್ರೋಶಗೊಂಡ ಶಾಸಕರು, ಅವನು ಯಾರು ಗುತ್ತಿಗೆದಾರ ಸ್ಥಳಕ್ಕೆ ಬರುವಂತೆ ಹೇಳಿ ಎಂದು ಯುಜಿಡಿ ಸಹಾಯಕ ಅಭಿಯಂತರ ಜಗದೀಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇವರು ಮಾಡುವ ಕೆಲಸದಿಂದಾಗಿ ನಗರದಲ್ಲಿ ಸಾರ್ವಜನಿಕರಿಗೆ ಬಹಳ ತೊಂದರೆ ಆಗುತ್ತಿದೆ. ಅವರು ತಮಿಳುನಾಡಿನಲ್ಲಿ ಕುಳಿತು ಮಜಾ ಮಾಡುತ್ತಿದ್ದಾರೆ. ಇಂತಹ ಕೆಲಸದವರ ಅವಶ್ಯಕತೆ ನಮ್ಮ ನಗರಕ್ಕೆ ಬೇಕಾಗಿಲ್ಲ.  ಗುಣಮಟ್ಟದ ಕಾಮಗಾರಿ ಮಾಡುವುದಾದರೆ ಮಾಡಿ ಇಲ್ಲದೆ ಹೋದರೆ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದರು.

ಜನಸ್ಪಂದನ ಸಭೆಯಲ್ಲಿ ಕೆಲವು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯನ್ನು ಕಂಡು ಶಾಸಕ ಎಸ್. ರಾಮಪ್ಪ ಏಕವಚನ ಬಳಕೆ ಮಾಡಿದ್ದು ಕಂಡು ಬಂತು.  ಸಭೆಯಲ್ಲಿ ಉದಯಕುಮಾರ್ ತಳವಾರ ಮತ್ತು ಎಸ್. ಲಕ್ಷ್ಮೀ ನಗರಸಭೆಯ ಇಬ್ಬರೂ ಪೌರಾಯುಕ್ತರು, ಜನರು ತಮ್ಮ ಸಮಸ್ಯೆ ಹೇಳಿದಾಗ ಅವರ ಅವಧಿಯಲ್ಲಿ ಏನಾಗಿತ್ತೋ ಅದನ್ನು ಸಾರ್ವಜನಿಕರಿಗೆ ಹೇಳುವ ಕಾರ್ಯವನ್ನು ಮಾಡಿದರು. ಇದರಿಂದಾಗಿ ನಗರಸಭೆ ಪೌರಾಯುಕ್ತರು ಯಾರು ಎಂಬುದನ್ನು ಅರಿಯದ ಪರಿಸ್ಥಿತಿ ಸಾರ್ವಜನಿಕರದಾಗಿತ್ತು.

ನಗರಸಭೆ ಸಿಬ್ಬಂದಿಗಳು ಕಡಿಮೆ ಇರುವುದು ನಮ್ಮ ಗಮನಕ್ಕೆ ಬಂದಿದೆ ನಗರದ ಏಳು ನೂರು ಜನರಿಗೆ ಒಬ್ಬ ಪೌರಕಾರ್ಮಿಕರು ಇದ್ದರೆ ನಗರ ಸ್ವಚ್ಚತೆಯಿಂದ ಇರುತ್ತದೆ. ಆದರೆ ಸಿಬ್ಬಂದಿಗಳ ಕೊರತೆಯಿಂದ ಸ್ವಲ್ಪ ಮಟ್ಟಿಗೆ ಸ್ವಚ್ಛತೆಗೆ ಹಿನ್ನಡೆಯಾಗಿದೆ. ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಬಳಿ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಸರಿ ಪಡಿಸುವ ವ್ಯವಸ್ಥೆ ಮಾಡಲಾಗುವುದು ಮತ್ತು ಸ್ಥಳೀಯ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಕುಡಿಯಲು ನೀರಿನ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಮಾಡುವಂತೆ ಹೇಳಿದರು. 

ನಗರಸಭೆ ಸದಸ್ಯ ಶಂಕರ್ ಖಟಾವ್ಕಾರ್ ಮಾತನಾಡಿ ನಗರಸಭೆ ಅನ್ನುವುದು ಸ್ಥಳೀಯ ಜನತೆಗೆ ನರಕಸಭೆ ಅನ್ನುವ ಮಟ್ಟಕ್ಕೆ ಹೋಗಿ ನಿಂತಿದೆ. ಇಲ್ಲಿ ಯಾವುದೇ ಸಿಬ್ಬಂದಿಗಳು ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಕೆಲಸವನ್ನು ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಸಾರ್ವಜನಿಕರು ರೋಸಿ ಹೋಗಿದ್ದಾರೆ.ಇದರ ಬಗ್ಗೆ ಸಾಕಷ್ಟು ಸಾರಿ ಹೇಳಿದ್ದರೂ ತಿದ್ದಿಕೊಂಡಿಲ್ಲ. ಈ ಬೆಳವಣಿಗೆ ಕೈ ಬಿಡದಿದ್ದರೆ ಮುಂದೆ ಸಾರ್ವಜನಿಕರೇ ಉತ್ತರ  ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.

ದಿವಾಕರ ಶಿಂಪಿ ಮಾತನಾಡಿ ನಗರಸಭೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಯ ಆಸ್ತಿಯನ್ನು ಖಾತೆ ಮಾಡುತ್ತಿಲ್ಲ. ಇದರಿಂದಾಗಿ ಸಬ್ ರಿಜಿಸ್ಟರ್‌ ಕಚೇರಿಯಲ್ಲಿ ನೋಂದಣಿ ಮಾಡಿಸಲು ಬರುವುದಿಲ್ಲ. ಬಡಾವಣೆಯ ಖಾತೆ ಮಾಡುವುದಕ್ಕೆ ಅವಕಾಶವನ್ನು ಕಲ್ಪಿಸುವಂತೆ ಹೇಳಿದರು. ಸದಾಶಿವ ಬೊಂಗಾಳೆ ಮಾತನಾಡಿ ನಗರದಲ್ಲಿ  ಹೊಸದಾಗಿ ನಿರ್ಮಾಣ ಮಾಡಿರುವ ಬಡಾವಣೆಯಲ್ಲಿ   ನಗರಸಭೆ ವತಿಯಿಂದ ಖಾತೆ ಮಾಡಿಕೊಡುವುದಕ್ಕೆ ಬರುವುದಿಲ್ಲ ಎಂದಾದರೆ ಆ ಬಡಾವಣೆಯ ನಿವಾಸಿಗಳಿಂದ ಯಾಕೆ ಕಂದಾಯವನ್ನು ಕಟ್ಟಿಸಿಕೊಳ್ಳುತ್ತಿರಾ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ನಂತರದಲ್ಲಿ ಕಂದಾಯವನ್ನು ಕಟ್ಟಿಸಿಕೊಳ್ಳಿ ಎಂದರು.

ಜಿ.ಕೆ. ಸುರೇಶ್ ಮಾತನಾಡಿ ನಗರದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಚರಂಡಿ ಕಾಮಗಾರಿ ಮಾಡುವಂತೆ ಮೂರು ವರ್ಷಗಳಿಂದ ಹೇಳಿದರೂ ಅಧಿಕಾರಿಗಳು ಮಾಡುತ್ತಿಲ್ಲ. ಇದರಿಂದಾಗಿ ಈ ಸ್ಥಳದಲ್ಲಿ ಅನೇಕ ಅಪಘಾತ ಸಂಭವಿಸಿ ಸಾಕಷ್ಟು ನೋವುಗಳು ಸಾರ್ವಜನಿಕರು ಪಡುವಂತಾಗಿದೆ ಎಂದು ಹೇಳಿದರು. ಸುಲೋಚನಮ್ಮ ಮಾತನಾಡಿ ನಗರದಲ್ಲಿನ ಬಡಾವಣೆಯಲ್ಲಿ ನಮಗೆ ಸೈಟಿನ ಹಕ್ಕುಪತ್ರವನ್ನು ನೀಡುವುದಾಗಿ ನಗರಸಭೆ ಅಧಿಕಾರಿಗಳು ನಮ್ಮ ಬಳಿ ಮೂವತ್ತು ಸಾವಿರ ಹಣವನ್ನು ಪಡೆದಿದ್ದಾರೆ. ಆದರೆ ಇದುವರೆಗೂ ನಮಗೆ ಹಕ್ಕುಪತ್ರವನ್ನು ನೀಡಿರುವುದಿಲ್ಲ. ಮತ್ತು ಯಾವುದೇ ಮೂಲಭೂತ ಸೌಕರ್ಯಗಳ ನ್ನು ನೀಡದೆ ಕಂದಾಯವನ್ನು ಕಟ್ಟಿ ಎಂದು ಜೋರು ಮಾಡುತ್ತಾರೆ ಎಂದು ಹೇಳಿದರು.

ವಿಶ್ವನಾಥ ಮೈಲಾಳ ಮಾತನಾಡಿ ನಗರದ ಮೋಚಿ ಕಾಲೋನಿಯಲ್ಲಿರುವ ನಗರಸಭೆ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಆ ಸ್ಥಳವನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡು ಅದರಲ್ಲಿ ಮಳಿಗೆ ನಿರ್ಮಾಣ ಮಾಡಿ ಬಾಡಿಗೆ ಹಣವನ್ನು ಅಕ್ರಮವಾಗಿ ತಿನ್ನುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಹೇಳಿದರು. ನಾಗರಾಜ್ ಬಡೆಗೆರ ಮಾತನಾಡಿ ನಗರಸಭೆಯ ಮಾಜಿ ಅಧ್ಯಕ್ಷರಾದ ವಿಶ್ವನಾಥ ಭೂತೆ ಎಂಬವವರು ತಮ್ಮ ಪ್ರಭಾವವನ್ನು ಬೀರಿ ನಮ್ಮ ಆರು ಅಡಿ ಸ್ಥಳವನ್ನು ಅಕ್ರಮ ಮಾಡಿಕೊಂಡು ಕಟ್ಟಡವನ್ನು ಕಟ್ಟಿದ್ದಾರೆ ಮತ್ತು ಈ ಸ್ಥಳದಲ್ಲಿ ಇರುವ ದೇವಸ್ಥಾನದ ಜಾಗವನ್ನು ಸಹ ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.  ಹೆಚ್. ಸುಧಾಕರ ಮಾತನಾಡಿ ನಗರಸಭೆಯಲ್ಲಿ ಸಿಬ್ಬಂದಿಗಳು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ನಗರ ಸ್ವಚ್ಚತೆ ಕೆಲಸಗಳು ಸರಿಯಾದ ಸಮಯಕ್ಕೆ ಮಾಡುತ್ತಿಲ್ಲ ಆದ್ದರಿಂದ ನಗರಸಭೆ ಸಿಬ್ಬಂದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳುವಂತೆ ಹೇಳಿದರು.

ಪೌರಾಯುಕ್ತೆ ಎಸ್ ಲಕ್ಷ್ಮೀ ಮಾತನಾಡಿ ನಗರದ ಮೋಚಿ ಕಾಲೋನಿಯಲ್ಲಿರುವ ನಗರಸಭೆ ಸ್ಥಳವನ್ನು ಆಕ್ರಮ ಮಾಡಿಕೊಳ್ಳಲು ಹಿಂದೆ ಇದ್ದ ನಗರಸಭೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿದೆ 10-10 ಅಡಿ ಅವರ ಹೆಸರಿನಲ್ಲಿ ಇದ್ದ ಜಾಗವನ್ನು 70 -20 ಅಡಿಯಲ್ಲಿ ಅಕ್ರಮವಾಗಿ ಖಾತೆ ಮಾಡಲಾಗಿದೆ. ಇದರ ಬಗ್ಗೆ ಆರ್.ಸಿ‌. ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ನ್ಯಾಯಲಯದ ಆದೇಶ ಬಂದ ತಕ್ಷಣವೇ ಮಳಿಗೆ ಕಟ್ಟಡವನ್ನು ಧ್ವಂಸ ಮಾಡಲಾಗುವುದು ಎಂದು ಹೇಳಿದರು.

ಪೌರಾಯುಕ್ತ ಉದಯಕುಮಾರ್ ಮಾತನಾಡಿ ನಾನು ಯಾವುದೇ ವ್ಯಕ್ತಿಗಳು ಪೋನ್ ಮಾಡಿದಾಗ ತಕ್ಷಣವೇ ಸ್ಪಂದಿಸುವ ಕೆಲಸವನ್ನು ಮಾಡಿದ್ದು, ಆದರೆ ಕೆಲಸದ ಒತ್ತಡದಿಂದಾಗಿ ಕೆಲವು ಸಲ ಪೋನ್ ಎತ್ತದೆ ಇರಬಹುದು ಆದರೆ ಸ್ಥಳೀಯ ಜನತೆಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿರುವುದಾಗಿ ಹೇಳಿದರು.

ಚಿದಾನಂದ ಕಂಚಿಕೇರಿ ಮಾತನಾಡಿ ಹಲವು ವರ್ಷಗಳಿಂದ ನಗರಸಭೆಯಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳಿಗೆ, ಸರಿಯಾದ ರೀತಿಯಲ್ಲಿ ಕರ್ತವ್ಯವನ್ನು ಮಾಡದೆ ಇದ್ದರೆ ನಿಮ್ಮನ್ನು ವರ್ಗಾವಣೆ ಮಾಡಿಸುವುದಾಗಿ ಪ್ರಾರಂಭದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ತಿಳಿಸಿದ್ದಿರಿ. ಆದರೆ ನಗರಸಭೆ ಆರೋಗ್ಯ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯನ್ನು ನೋಡಿಯೂ ಏಕೆ ಅವರನ್ನು ಬೇರೆ ನಗರಕ್ಕೆ ವರ್ಗಾವಣೆ ಮಾಡಲು ಮುಂದಾಗಿಲ್ಲ ಎಂದು ಪ್ರಶ್ನಿಸಿದರು.

ಯುಜಿಡಿ ಸಹಾಯಕ ಅಭಿಯಂತರ  ಜಗದೀಶ್ ಮಾತನಾಡಿ ನಗರದ ಹಳೆ ನಗರದ ಯುಜಿಡಿ ಕಾಮಗಾರಿಯನ್ನು ನಾವು ಮಾಡಿರುವುದಿಲ್ಲ ಇದರಿಂದಾಗಿ ಆ ಕಳಪೆ ಕಾಮಗಾರಿ ರಾಮಕೃಷ್ಣಪ್ಪನವರು ಇದ್ದ ಸಮಯದಲ್ಲಿ ಆಗಿದೆ ಅದಕ್ಕೂ ನಮಗೆ ಸಂಭಂದವಿಲ್ಲ. ನಗರದ ಹೈಸ್ಕೂಲ್ ಬಡಾವಣೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಅದರಲ್ಲಿ ಯಾವುದೇ ರೀತಿಯ ಕಳಪೆ ಕಾಮಗಾರಿ ನಡೆದಿದ್ದರೆ ತಿಳಿಸಿರಿ ಎಂದರು. 

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಪಕ್ಕಿರಮ್ಮ, ನಾಗರತ್ನಮ್ಮ, ನಿತಾ ಮೆಹರ್ವಾಡೆ, ಹನುಮಂತಪ್ಪ ಬಾಬುಲಾಲ್, ಮುಜಾಮಿಲ್, ಮಹಬೂಬ್ ಬಾಷಾ, ಮುಖಂಡರಾದ ಮಂಜುನಾಥ್ ಅಂಗಡಿ, ಮಾರುತಿ ಬೇಡರ್, ದಾದಪೀರ್. ಅರುಣ್ ಬೊಂಗಾಳೆ, ನಗರಸಭೆ ಎಇಇ ಬಿರಾದಾರ, ಪರಿಸರ ಅಭಿಯಂತರ ತಿಮ್ಮಪ್ಪ ಅಬ್ದುಲ್ ಹಮೀದ,, ನಗರಸಭೆ ಸಿಬ್ಬಂದಿಗಳಾದ ಮಂಜುನಾಥ್, ತಿಪ್ಪೇಸ್ವಾಮಿ, ದಯಾನಂದ, ಪ್ರವೀಣ್, ಅಣ್ಣಪ್ಪ, ಇತರರು ಹಾಜರಿದ್ದರು. 

error: Content is protected !!