ಬೆಂಗಳೂರು, ಮಾ.9 – ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರವಾಗಿ ಕುರಿತು ಚರ್ಚಿಸಲು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮಂಗಳವಾರ ಸಂಜೆ ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ಕರೆದಿದ್ದ ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ.
ಅಂತಿಮವಾಗಿ ಮಾ.16 ರ ಮಂಗಳವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಮತ್ತೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಶಾಸಕರು, ಮಾಜಿ ಶಾಸಕರು, ವಿವಿಧ ಸಂಘಟನೆಗಳ ಹೋರಾಟಗಾಗರರು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು 3ನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಾಜಕ್ಕೆ ಕೊಟ್ಟ ಮಾತಿನಂತೆ ಮಾ.9 ರ ಒಳಗಾಗಿ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ 7.5 ಕ್ಕೆ ಹೆಚ್ಚಿಸಲು ಕ್ರಮಕ್ಕೆ ಕೈಗೊಳ್ಳಬೇಕಿತ್ತು. ವಿಳಂಬ ಆಗುತ್ತಿರುವ ಬಗ್ಗೆ ನಮ್ಮ ಜೊತೆಯೂ ಮಾತನಾಡಿಲ್ಲ, ಸರ್ಕಾರ ಯಾಕೆ ಈ ರೀತಿ ನಿರ್ಲಕ್ಷ್ಯ ಮಾಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ, ಇಂದಿನ ಸಭೆಯಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗಿದ್ದು ಮಾ. 16 ರಂದು ಮತ್ತೆ ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳತ್ತೇವೆ. ಅಷ್ಟರೊಳಗಾಗಿ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿ ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.