ರಾಣೇಬೆನ್ನೂರು : ಜಗದ ಕಲ್ಯಾಣ ಜಪಿಸುವ ಜಂಗಮ

ಗಂಗೆ, ತುಂಗೆ, ಯಮುನೆ, ನರ್ಮದಾ, ಗೋ ದಾವರಿ ಯಾವುದೇ ನದಿಗೆ ಆರತಿ ಬೆಳಗಿದರೆ ಜಗ ತ್ತಿನ ಪ್ರತಿಯೊಂದು ಜೀವರಾಶಿಯ ರಕ್ಷಣೆ ಆಗಲಿದೆ ಎನ್ನುವ ಮಹದಾಸೆ ಹೊಂದಿರುವ ಕೋಡಿಯಾಲದ ಪುಣ್ಯಕೋಟಿ ಮಠದ ಜಗದೀಶ್ವರ ದೇವರು ಕಳೆದ ವರ್ಷದಿಂದ ಪ್ರಾರಂಭಿಸಿದ ತುಂಗಾರತಿ ಸಮಾರಂಭ ಫೆ. 28 ರಂದು ನಡೆಯಲಿದೆ.

ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ರಾಮನಾಳ ಗ್ರಾಮದ ಶ್ರೀ ಶೈಲ ಶಾಖಾಮಠದ ವೇ. ಶ್ರೀ ಗದಿಗೆಯ್ಯ  ಹಾಗೂ ಶ್ರೀಮತಿ ಗಿರಿಜಮ್ಮ ಅವರ ಪುಣ್ಯಗರ್ಭದಲ್ಲಿ 1986 ರಲ್ಲಿ ಜನಿಸಿದ ಜಗದೀಶ್ವರ ಅವರು ರಾಮನಾಳದಲ್ಲಿ ಪ್ರಾಥಮಿಕ, ಮಂಟೂರಿನ  ಅಡವಿಸಿದ್ದೇಶ್ವರ ಮಠದಲ್ಲಿ ಪ್ರೌಢ, ನೂಲ್ವಿಯಲ್ಲಿ ಪದವಿ ಶಿಕ್ಷಣ ಪಡೆದು ಹಾವೇರಿ ಸಿಂದಗಿ ಮಠದಲ್ಲಿ ಸಂಸ್ಕೃತ, ಜೋತಿಷ್ಯ ವೇದಾಧ್ಯಯನ ಮಾಡಿರುತ್ತಾರೆ.

ಮಹಾವೇದಿಕೆ

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ  ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರಿಗೆ   `ವಿಶ್ವಮಾತಾ ಪುಣ್ಯಕೋಟಿ’ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಮಾರಂಭದಲ್ಲಿ ಶ್ರೀಶೈಲ, ಆದಿಚುಂಚನಗಿರಿ, ವಾಲ್ಮೀಕಿ ಜಗದ್ಗುರುಗಳು ಸೇರಿದಂತೆ 27 ವಿವಿಧ ಮಠಾಧೀಶರು, ಹಾಲಿ ಹಾಗೂ ಮಾಜಿ ಸಚಿವರು-ಶಾಸಕರು ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ.   ವಿವಿಧ ಕ್ಷೇತ್ರದ ಸುಮಾರು 30 ಸಾಧಕರು   ಶ್ರೀರಕ್ಷೆ ಪಡೆಯಲಿದ್ದಾರೆ.

ವೃಷಭರೂಪಿ ಬಸವ

ನಂಬಿ ಕರೆದರೆ ಓಡೋಡಿ ಬರುವ, ಭಕ್ತರ ಬವಣೆಯನ್ನು ಪರಿಹರಿಸುವ, ತಪ್ಪು ಮಾಡಿದವ ರಿಗೆ ತಿದ್ದಿ ಬುದ್ಧಿ ಹೇಳುವುದೆನ್ನುವ  ರಾಮನಗರ ತಾಲ್ಲೂಕು  ಕವಣಾಪುರದ ವೃಷಭ  ರೂಪಿ ಬಸ ವೇಶ್ವರ ಸ್ವಾಮಿಗಳು ಸಮಾರಂಭದ ಮುನ್ನಾ ದಿನ ಅಂದರೆ ಫೆ. 27 ರಂದು ಆಗಮಿಸಿ 28 ರ ಸಂಜೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಕಲ ಸದ್ಭಕ್ತರಿಗೆ ದರ್ಶನಾಶೀರ್ವಾದ    ನೀಡಲಿದ್ದಾರೆ.

11 ನೇ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸುವ ತುಡಿತಕ್ಕೊಳಗಾಗಿ ಬೆಳಗಾವಿ ಬಳಿಯ ಮುಕ್ತಿ ಮಠದಲ್ಲಿ ಗುರು ಸೇವೆಗೈದು, ದೊಡ್ದೇರಿ ದತ್ತಾಶ್ರಮ ಗುರುಗಳಿಂದ ಧ್ಯಾನಯೋಗ ಪಡೆದು, ಗವಿಮಠದ ಸಿದ್ದೇಶ್ವರ ಶಿವಯೋಗಿಗಳ ಜನ್ಮಭೂಮಿ ಬೆಳಗಲಿಯಲ್ಲಿ 48 ದಿನಗಳ  ಅನುಷ್ಠಾನ ಶಾಸ್ತ್ರದೊಂದಿಗೆ ಸನ್ಯಾಸ ದೀಕ್ಷೆ  ಪಡೆದುಕೊಂಡರು.

ತದನಂತರದಲ್ಲಿ ಸಮಾಜಮುಖಿಯಾಗಿ ಧಾರ್ಮಿಕ ಸೇವೆ ಮಾಡಲು ಮಧ್ಯ ಕರ್ನಾಟಕದ ರಾಣೇಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣಂ ಬಳಿಯ ತುಂಗಭದ್ರಾ ನದಿ ತೀರದಲ್ಲಿ ಪುಣ್ಯಕೋಟಿ ಮಠ ಸ್ಥಾಪಿಸಿದರು. ಕೆಲ ದಿನಗಳಲ್ಲಿಯೇ 21 ದಿನಗಳ ಸಮಾಧಿ ಅನುಷ್ಠಾನ ಮಾಡಿ ನಾಡಿನಾದ್ಯಂತ ಮಠದ ಕೀರ್ತಿ ಪಸರಿಸುವಂತೆ ಮಾಡಿದರು. ಇಲ್ಲಿನ ಜನಮನ ಜಂಗಮ ಜ್ಯೋತಿಯಾಗಿ ನಾಡು ನುಡಿ, ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳೆಸುವ ಪ್ರಯತ್ನ ನಡೆಸಿದ್ದಾರೆ. 

ಭೂಮಾತೆ, ಗೋಮಾತೆ, ಗಂಗಾಮಾತೆಯರನ್ನು ಸ್ಮರಿಸುವ, ನಿಸರ್ಗ ಮಾತೆಯನ್ನು ಗೌರವಿಸುವ ಸಮಾರಂಭ ಇದಾಗಿದ್ದು, ಉತ್ತರ ಭಾರತದ ಹರಿದ್ವಾರ, ಋಷಿಕೇಶ, ಕಾಶಿ ಮುಂತಾದ ಐತಿಹಾಸಿಕ ಪುಣ್ಯ ಕ್ಷೇತ್ರಗಳ ಗಂಗಾನದಿ ತೀರದಲ್ಲಿ ಜರುಗುವ ಗಂಗಾರತಿ ಮಾದರಿಯಲ್ಲಿ ಇಲ್ಲಿನ ಪುಣ್ಯಕೋಟಿ ತಪೋಕ್ಷೇತ್ರದ ಬಳಿಯ ಪೂರ್ವ-ಉತ್ತರಾಭಿಮುಖ ವಾಗಿ ಹರಿಯುವ ತುಂಗಭದ್ರಾ ತೀರದಲ್ಲಿ ತುಂಗಾರತಿ ಸಮಾರಂಭ ಜರುಗಲಿದೆ.


ಮನೋಹರ ಮಲ್ಲಾಡದ

error: Content is protected !!