ಸತಿ ಪತಿಗಳಲ್ಲಿ ಹೊಂದಾಣಿಕೆ ಇದ್ದರೆ ಕಲಹ ಬಾರದು

ಹರಿಹರದಲ್ಲಿನ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶಾಸಕ ಹೆಚ್.ಎಸ್. ಶಿವಶಂಕರ್

ಹರಿಹರ, ಫೆ24-  ದಾಂಪತ್ಯ ಜೀವನದಲ್ಲಿ ಸತಿ ಪತಿಗಳು  ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಿದಾಗ ಕುಟುಂಬದಲ್ಲಿ ಯಾವುದೇ ರೀತಿಯ ಕಲಹ ಬರುವುದಿಲ್ಲ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಮೈದಾನದಲ್ಲಿ ಕರುನಾಡ ಕದಂಬ ರಕ್ಷಣಾ ವೇದಿಕೆ ವತಿಯಿಂದ ಸರ್ವಧರ್ಮಿಯರ ಉಚಿತ ಸಾಮೂಹಿಕ ಕಲ್ಯಾಣ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ಥಳೀಯ ಹೆಚ್. ಸುಧಾಕರ್ ನೇತೃತ್ವದ ಕರುನಾಡ ರಕ್ಷಣಾ ವೇದಿಕೆ ಸರ್ವಧರ್ಮಿಯರ ಬಡವರ ಒಳಿತಿಗಾಗಿ ಉಚಿತ ಸಾಮೂಹಿಕ ಮದುವೆ ಮಾಡಿ ಬಡವರ ಕಷ್ಟವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಮಾಜ ಮುಖಿ ಕಾರ್ಯದ ಕಡೆಗೆ ಹೆಜ್ಜೆಯನ್ನು ಹಾಕಿರುವುದು ಶ್ಲಾಘನೀಯ. ಇವರ ಕಾರ್ಯ ಇನ್ನೊಬ್ಬರಿಗೆ ಮಾದರಿಯಾಗಿದೆ ಎಂದರು.

ದಾವಣಗೆರೆಯ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಸತಿ – ಪತಿಗಳ ಮನಸ್ಸು ಎರಡು ಕಣ್ಣಿನ ರೀತಿಯಲ್ಲಿ ಒಂದಾಗಿ ಇದ್ದರೆ ಸಂಸಾರದಲ್ಲಿ ಯಾವುದೇ ರೀತಿಯ ಬಿರುಕುಗಳು ಹುಟ್ಟುವುದಕ್ಕೆ ದಾರಿಯಾಗುವುದಿಲ್ಲ. 

ಆ ನಿಟ್ಟಿನಲ್ಲಿ ಸತಿಪತಿಗಳು ಹೊಂದಾಣಿಕೆಯ ಜೀವನವನ್ನು ಮಾಡಬೇಕು. ಮತ್ತು ಸಂಸಾರದಲ್ಲಿ ಬಹು ಮುಖ್ಯವಾಗಿ ತಾಳ್ಮೆ, ಸಹನೆ ಇರಬೇಕು ಅಂತ ಕುಟುಂಬದಲ್ಲಿ ಯಾವುದೇ ವೈಮನಸ್ಸಿಗೆ ದಾರಿ ಇರುವುದಿಲ್ಲ ಎಂದು ಹೇಳಿದರು.

ಹರಪನಹಳ್ಳಿ ಎಂ. ಪಿ. ವೀಣಾ ಮಾತನಾಡಿ, ಹಲವು ನಗರಗಳಲ್ಲಿ ಕನ್ನಡದ ಭಾಷೆ ಬಳಕೆ ಕಡಿಮೆಯಾಗಿರುವುದನ್ನು ಕಾಣುತ್ತಿದ್ದೇವೆ. ಕನ್ನಡ ಮತ್ತು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕಾರ್ಯಗಳು ಆಗಬೇಕಾಗಿದೆ. ನಾಡಿನ ಎಲ್ಲ ಕನ್ನಡ ಪರ ಸಂಘಟನೆಗಳು ಒಗ್ಗಟ್ಟಿನಿಂದ ಕನ್ನಡವನ್ನು ಉಳಿಸಲು ಹೋರಾಟದ ಹೆಜ್ಜೆಗಳನ್ನು ಇಡಬೇಕಾಗಿದೆ ಎಂದು ಹೇಳಿದರು.

ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹೆಚ್. ಸುಧಾಕರ್ ಮಾತನಾಡಿದರು. ಸಾಮೂಹಿಕ ವಿವಾಹದಲ್ಲಿ 12 ದಂಪತಿಗಳು ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಸಂದರ್ಭದಲ್ಲಿ ಪದ್ಮಶಾಲಿ ಗುರುಪೀಠದ ಶ್ರೀ ಪ್ರಭುಲಿಂಗ ಸ್ವಾಮಿಗಳು, ಬೆಂಗಳೂರು ಕಾಳಿಕಾ ಮಠದ ಶ್ರೀ ಋಷಿಕುಮಾರ ಸ್ವಾಮಿಗಳು, ಬಂಜಾರ ಗುರುಪೀಠದ ಸೇವಾಲಾಲ್ ಸರ್ದಾರ್ ಸ್ವಾಮಿಗಳು. ಕವಲೆತ್ತು ಬಸವ ಕೇಂದ್ರದ ಶರಣೆ ಮುಕ್ತಾಯಮ್ಮ, ಮೌಲಾನ ಜುಬೇರ್ ಅಹ್ಮದ್, ಕಾಳಿದಾಸ ನಗರ ಅಶ್ರಫಿ ಸಖಾಫಿ, ಸಮಾಜ ಸೇವಕ ಶ್ರೀನಿವಾಸ್ ನಂದಿಗಾವಿ, ವಕೀಲ ಎಂ. ನಾಗೇಂದ್ರಪ್ಪ, ಸಿ.ಎನ್. ಹುಲಗೇಶ್, ರೈತ ಮುಖಂಡ ಪ್ರಭುಗೌಡ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಪ್ರಶಾಂತ್ ಮೆಹರ್ವಾಡೆ ಇನ್ನಿತರರಿದ್ದರು.

error: Content is protected !!