ನೂತನ ವಿಜಯ ನಗರ ಜಿಲ್ಲೆಗೆ ನನ್ನ ವಿರೋಧವಿಲ್ಲ
– ಶಾಸಕ ಕರುಣಾಕರ ರೆಡ್ಡಿ
ಹರಪನಹಳ್ಳಿ, ಫೆ.22- ನೂತನ ವಿಜಯ ನಗರ ಜಿಲ್ಲೆಗೆ ನನ್ನ ವಿರೋಧವಿಲ್ಲ. ಆದರೆ, ಹರಪನಹಳ್ಳಿಯೇ ಜಿಲ್ಲಾ ಕೇಂದ್ರವಾಗಲಿ ಎಂಬ ನನ್ನ ಒತ್ತಾಯ ಇದ್ದೇ ಇದೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ತಿಳಿಸಿದ್ದಾರೆ.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪಟ್ಟಣದ ವಾಲ್ಮೀಕಿ ನಗರ ಸೇರಿದಂತೆ ನೂತನವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡ ಸಿ.ಸಿ ರಸ್ತೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 3 ತಾಲ್ಲೂಕುಗಳು ಸೇರಿ ಜಿಲ್ಲೆಯಾದ ಉದಾಹರಣೆ ಇವೆ. ಭೌಗೋಳಿ ಕವಾಗಿ ಈ ಭಾಗದ ಜನರ ಅನುಕೂಲಕ್ಕಾಗಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕೊಟ್ಟೂರು, ಹಡಗಲಿ, ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳನ್ನೊಳಗೊಂಡು ಹರಪನಹಳ್ಳಿ ಜಿಲ್ಲಾ ಕೇಂದ್ರವಾಗಲೀ ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.
ಹರಪನಹಳ್ಳಿ ಪಟ್ಟಣಕ್ಕೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಮಂ ಜೂರಾತಿಗೆ ಕೆಯುಡಬ್ಲ್ಯೂ ನವರು ಸರ್ವೇ ಮಾಡಬೇಕು.
ಅವರಿಗೆ ಪುರಸಭೆಯವರು 15 ಲಕ್ಷ ರೂ. ಹಣ ಪಾವತಿಸಬೇಕು. ನಂತರ ನಾನು ಯೋಜನೆ ಮಂಜೂರು ಮಾಡಿಸುತ್ತೇನೆ ಎಂದು ಹೇಳಿದರು.
ಗರ್ಭ ಗುಡಿ ಬ್ರಿಡ್ಜ್ ಕಂ ಬ್ಯಾರೇಜು ಕಾಮಗಾರಿಗೆ ಸಂಬಂಧಪಟ್ಟ ಸಚಿವರ ಬಳಿ ಮಾತನಾಡಿ, ಶೀಘ್ರ ಶಂಕುಸ್ಥಾಪನೆ ಮಾಡುತ್ತೇವೆ. ಆದರೆ, ಈಗಾಗಲೇ ಕಾಮಗಾರಿ ಆರಂಭಿಸಲು ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.
ತಾಲ್ಲೂಕಿನ ಕೆರೆಗಳಿಗೆ ನದಿ ನೀರು ತುಂಬಿಸುವ ಕಾಮಗಾರಿ ಶೇ.90 ರಷ್ಟು ಮುಗಿದಿದೆ ಎಂದ ಅವರು ತಾಲ್ಲೂಕಿಗೆ ಬಡವರಿಗೆ ವಿತರಿಸಲು 300 ಮನೆಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಮೂಲಭೂತ ಸೌಕರ್ಯಗಳಿಲ್ಲ ಎಂಬ ಕಾರಣಕ್ಕೆ ಅಂಬೇಡ್ಕರ್ ಭವನ ಹಾಗೂ ಜಗಜೀವನ್ ರಾಂ ಭವನಗಳ ಉದ್ಘಾಟನೆಯನ್ನು ದಲಿತ ಸಮಾಜದ ಮುಖಂಡರ ವಿರೋಧದಿಂದ ಕೈ ಬಿಟ್ಟ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮೂಲಸೌಕರ್ಯ ಒದಗಿಸಲು ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಮಂಜುನಾಥ್ ಇಜಂತಕರ್, ಸದಸ್ಯರುಗಳಾದ ದ್ಯಾಮಜ್ಜಿ ರೊಕ್ಕಪ್ಪ, ಹರಾಳು ಅಶೋಕ್, ಕಿರಣ್ಶಾನುಬಾಗ್, ಎಂ.ಕೆ.ಜಾವೀದ್, ಜಿಲ್ಲಾ ಬಿಜೆಪಿ ಎಸ್.ಟಿ ಘಟಕದ ಕಾರ್ಯದರ್ಶಿ ಆರ್.ಲೋಕೇಶ್, ಮುಖಂಡರಾದ ಎಂ.ಪಿ.ನಾಯ್ಕ್ ಬಾಗಳಿ ಕೋಟ್ರೇಶಪ್ಪ, ಯಡಿಹಳ್ಳಿ ಶೇಖರಪ್ಪ, ಕೆಂಗಳ್ಳಿ ಪ್ರಕಾಶ್ ರಾಘವೇಂದ್ರ ಶೆಟ್ಟಿ, ಯು.ಪಿ.ನಾಗರಾಜ್, ಎಂ.ಸಂತೋಷ ಬಾಗಳಿ ಕೊಟ್ರೇಶಪ್ಪ, ಭೂ ಸೇನಾ ನಿಗಮದ ಇಇ ರಮೇಶ್ ಗಲಗಲಿ, ಎಇ ವೀರಣ್ಣ ಅಂಗಡಿ, ಸಿಡಿಪಿಒ ಮಂಜುನಾಥ್ ಇತರರಿದ್ದರು.