ಮಲೇಬೆನ್ನೂರಿನ ನಂದಿ ಸೌಹಾರ್ದ ಸಹಕಾರಿಗೆ 28,25,646 ನಿವ್ವಳ ಲಾಭ
ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಹಳ್ಳಿಹಾಳ್ ವೀರನಗೌಡ
ಮಲೇಬೆನ್ನೂರು, ಫೆ.21- ಪಟ್ಟಣದ ಪ್ರತಿಷ್ಠಿತ ಶ್ರೀ ನಂದಿ ಸೌಹಾರ್ದ ಸಹಕಾರಿ ನಿಯಮಿತದ 2019-20ನೇ ಸಾಲಿನ ಪ್ರಥಮ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಭಾನುವಾರ ಕೊಕ್ಕನೂರು ಗ್ರಾಮದ ಪವನ ದೇವ ಕಲ್ಯಾಣ ಮಂಟಪದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಅಧ್ಯಕ್ಷ ಹಳ್ಳಿಹಾಳ್ ಹೆಚ್. ವೀರನಗೌಡ ಅವರು 2019-20ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ, ಸಹಕಾರಿಯು ದಿನಾಂಕ 31.03.2020 ಕ್ಕೆ 28,25,646 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ.
2772 ಸದಸ್ಯರನ್ನು ಹಾಗೂ 8,94,80,024 ಕೋಟಿ ರೂ ಠೇವಣಿ ಹೋಂದಿರುವ ಸಹಕಾರಿಯು 41,06,85,004 ಕೋಟಿ ರೂ ವಾರ್ಷಿಕ ವಹಿವಾಟು ನಡೆಸಿದ್ದು, ಸದಸ್ಯರಿಗೆ 7,81,62,594 ಕೋಟಿ ರೂ ಸಾಲ ಸೌಲಭ್ಯ ಕಲ್ಪಿಸಿದೆ.
11,80,51,856 ಕೋಟಿ ರೂ ದುಡಿಯುವ ಬಂಡವಾಳ ಹೊಂದಿರುವ ಸಹಕಾರಿಯು ಸದಸ್ಯರಿಗೆ ಈ ವರ್ಷ ಶೇ. 11 ಡಿವಿಡೆಂಡ್ ನೀಡಲು ನಿರ್ಧರಿಸಿದೆ ಎಂದರು.
ಹಿರಿಯ ನಿರ್ದೇಶಕ ಜಿಗಳಿ ಇಂದೂಧರ್ ಮಾತನಾಡಿ, ನಮ್ಮ ಸಹಕಾರಿ ಈಗಾಗಲೇ ನಂದಿಗುಡಿಯಲ್ಲಿ ಶಾಖೆ ಹೊಂದಿದ್ದು ಅದಕ್ಕಾಗಿ ಸ್ವಂತ ಕಟ್ಟಡ ನಿರ್ಮಿಸಿದ್ದೇವೆ. ಈ ವರ್ಷ ದಾವಣಗೆರೆ ನಗರದಲ್ಲಿ ಸಹಕಾರಿಯ ಶಾಖೆ ಪ್ರಾರಂಭಿಸುವ ಉದ್ದೇಶವಿದೆ ಎಂದು ಮುಂದಿನ ವರ್ಷದ ಕಾರ್ಯಚಟು ವಟಿಕೆಗಳನ್ನು ತಿಳಿಸಿದರು.
2020-21ನೇ ಸಾಲಿಗೆ ಶಾಸನ ಬದ್ದ ಲೆಕ್ಕ ಪರಿಶೋಧಕರನ್ನು ನೇಮಿಸುವ ವಿಷಯ ವನ್ನು ಇಂದೂಧರ್ ಪ್ರಸ್ತಾಪಿಸಿದಾಗ ಕೆ.ಎಂ. ನಂದಿಗೌಡ ಮತ್ತು ಬಸಾಪುರದ ವೀರಭ ದ್ರಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿ, ಕಿರಣ್ ಪಾಟೀಲ್ ಅಥವಾ ಸುರೇಂದ್ರಪ್ಪ ಅವರನ್ನು ನೇಮಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಆಗ ಸಂಘದ ಮಾಜಿ ಅಧ್ಯಕ್ಷ ಬಿ. ವೀರಯ್ಯ ಅವರು ಮಧ್ಯಪ್ರವೇಶಿಸಿ, ಈಗಾಗಲೇ ಸಹಕಾರಿಯ ಸಭೆಯಲ್ಲಿ ತೀರ್ಮಾನಿಸಿರುವಂತೆ ಮತ್ತು ಅತಿ ಕಡಿಮೆ ಸಂಭಾವನೆ ಪಡೆದು ಲೆಕ್ಕ ಪರಿಶೋಧನೆ ಮಾಡುವ ಮಹೇಶ್ ಸೆಂಡಿಗೆ ಅವರನ್ನು ಈ ವರ್ಷ ನೇಮಕ ಮಾಡಿಕೊಳ್ಳೋಣ. ಮುಂದಿನ ವರ್ಷ ಸದಸ್ಯರು ಹೇಳಿದಂತೆ ಅವರನ್ನು ವಿಚಾರಿಸಿ. ಅವರು ಒಪ್ಪಿದರೆ ಅವರನ್ನು ನೇಮಿಸಿಕೊಳ್ಳಬಹುದು ಎಂದಾಗ ಸಭೆ ಸಮ್ಮತಿ ಸೂಚಿಸಿತು.
ಸದಸ್ಯರಿಗೆ ನೀಡುವ ಜಾಮೀನು ಸಾಲವನ್ನು 30 ಸಾವಿರ ರೂ ಗಳಿಂದ 50 ಸಾವಿರ ರೂಗಳಿಗೆ ಹೆಚ್ಚಿಸುವ ವಿಷಯವನ್ನು ಜಿಗಳಿ ಇಂದೂಧರ್ ಅವರು ಪ್ರಸ್ತಾಪಿಸಿದಾಗ ಪರ, ವಿರೋಧದ ಚರ್ಚೆ ನಡೆದು ಕೊನೆಗೆ ಒಪ್ಪಿಗೆ ನೀಡಲಾಯಿತು.
ಅಕೌಂಟೆಂಟ್ ಎಂ.ಬಿ. ನಾಗನಗೌಡ ಮಹಾಸಭೆಯ ನೋಟೀಸ್ ಓದಿ, ದಾಖಲು ಮಾಡಿದರು. ಕ್ಯಾಷಿಯರ್ ಹೆಚ್. ರುದ್ರಗೌಡ ಅವರು 2019-20ನೇ ಸಾಲಿನ ಕ್ರೋಢೀಕೃತ ಜಮಾ-ಖರ್ಚಿನ ವಿವರವನ್ನು ಮತ್ತು ಕಾರ್ಯದರ್ಶಿ ಹೆಚ್.ಎಂ. ಬಸವರಾಜ್ ಅವರು 2019-20ನೇ ಸಾಲಿನ ಕ್ರೋಢೀಕೃತ ಆಸ್ತಿ ಜವಾಬ್ದಾರಿ ತಃಖ್ತೆ ವಿವರವನ್ನು ಸಭೆಗೆ ಮಂಡಿಸಿದರು.
ಸಹಕಾರಿ ನಿರ್ದೇಶಕ ಜಿಗಳಿಯ ಗೌಡ್ರ ಬಸವರಾಜಪ್ಪ ಅವರು 2019-20ನೇ ಸಾಲಿನ ಲಾಭಾಂಶ ಹಂಚಿಕೆ ವಿವರವನ್ನು ಮತ್ತು ಸಹಕಾರಿ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಬಿ.ಜಿ. ಪಾಲಾಕ್ಷಪ್ಪ ಅವರು 2020-21ನೇ ಸಾಲಿನ ಮುಂಗಡ ಪತ್ರವನ್ನು ಸಭೆಗೆ ವಿವರಿಸಿದರು.
ಸಂಘದ ನಿರ್ದೇಶಕರಾದ ಹಳ್ಳಿಹಾಳ್ ಹೆಚ್.ಟಿ. ಶಾಂತನಗೌಡ, ಹೆಚ್.ಟಿ. ಪರಮೇಶ್ವರಪ್ಪ, ಜಿಗಳಿಯ ಎಂ.ವಿ. ನಾಗರಾಜ್, ಕೊಕ್ಕನೂರಿನ ಕೆ.ಹೆಚ್. ಆಂಜನೇಯ ಪಾಟೀಲ್, ಟಿ. ರಾಮಚಂದ್ರಪ್ಪ, ಆರ್. ನಾಗರಾಜ್, ಜಿ.ಬೇವಿನಹಳ್ಳಿಯ ಸಂತೋಷ್ ಪಾಳೇದ್, ಹಿಂಡಸಘಟ್ಟಿಯ ಶ್ರೀಮತಿ ಭಾಗ್ಯ ಉದಯಕುಮಾರ್, ಮಲೇಬೆನ್ನೂರಿನ ಎ. ಆರೀಫ್ ಅಲಿ, ಹಳ್ಳಿಹಾಳ್ ಎ.ಕೆ. ತಿಪ್ಪೇಶಪ್ಪ ಅವರು ವೇದಿಕೆಯಲ್ಲಿದ್ದರು.
ಸಹಕಾರಿ ನಿರ್ದೇಶಕ ಕೊಕ್ಕನೂರಿನ ಬಿ.ಹೆಚ್. ರವಿ ಸ್ವಾಗತಿಸಿದರು. ಅಕೌಂಟೆಂಟ್ ಸುಮಾ ವಂದಿಸಿದರು.
ಸಂಘದ ಮಾಜಿ ಅಧ್ಯಕ್ಷರಾದ ಎಂ. ಕರಿಬಸಯ್ಯ, ಜಿ.ಎಂ. ವಿಜಯಕುಮಾರ್, ಮುಖಂಡರಾದ ಹಿಂಡಸಘಟ್ಟಿ ಮುರುಗೇಶ್, ಬಂಡೇರ ತಿಮ್ಮಣ್ಣ, ವಕೀಲ ತಿಮ್ಮನಗೌಡ, ಹರಿಹರ ಮಂಜುನಾಥ್, ತಾ.ಪಂ. ಸದಸ್ಯ ಬಸವಲಿಂಗಪ್ಪ, ಕೆ.ಹೆಚ್. ನಾಗನಗೌಡ, ಉಪನ್ಯಾಸಕ ಬಿ.ಸಿ ರಾಕೇಶ್, ಹಳ್ಳಿಹಾಳ್ ಮಲ್ಲನಗೌಡ, ಜಿಗಳಿಯ ಟಿ. ಚಂದ್ರಶೇಖರಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಗೂ ಮುನ್ನ ಹರಿಹರದ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಹೆಚ್. ಪ್ಯಾಟಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.