ಜಾನಪದ ಅಕಾಡೆಮಿಯಲ್ಲಿ 108 ಕಲೆ ಕಲಿಯುವ ಅವಕಾಶ

ದಾವಣಗೆರೆ, ಫೆ.19- ಜಾನಪದ ಅಕಾಡೆಮಿ ವತಿಯಿಂದ ಜನಪದ ಕಲೆಗಳನ್ನು ಕಲಿಸುವ ಅವಕಾಶ ಕಲ್ಪಿಸ ಲಿದ್ದು, ನಿಮ್ಮ ಆಸಕ್ತಿಗನುಗುಣವಾದ ಕಲೆ ಯನ್ನು ಆಯ್ದುಕೊಂಡು ಕಲಿಕಾಸಕ್ತಿ ತೋರಿ ದರೆ ಶಿಷ್ಯ ವೇತನ ಸಹಿತ ಕಲಿಸುವುದಾಗಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಬಿ. ಮಂಜಮ್ಮ ಜೋಗತಿ ಸಮುದಾಯದವರಿಗೆ ತಿಳಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಅಭಯ ಸ್ಪಂದನ ಸಂಘಟನೆ ವತಿಯಿಂದ (ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆ) ಇಂದು ಹಮ್ಮಿಕೊಂಡಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮ ಮತ್ತು ಸಮುದಾಯದ ಸಾಧಕಿಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ, ಅವರು ಮಾತನಾಡಿದರು.

ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಸಹಿತ 180 ಜನಪದ ಕಲೆಗಳನ್ನು ಕಲಿಸುವ ಅವಕಾಶವನ್ನು ಜಾನಪದ ಅಕಾಡೆಮಿ ಕಲ್ಪಿಸಲಿದೆ. ಆ ಕಲೆಗಳನ್ನು ಕಲಿತು ಉನ್ನತವಾಗಿ ಬೆಳೆದು ಪದ್ಮಶ್ರೀ ಪ್ರಶಸ್ತಿಗೆ ನೀವೂ ಭಾಜನರಾಗಬೇಕು ಎಂದು ಆಶಿಸಿದರಲ್ಲದೇ, ಒಂದು ಜಿಲ್ಲೆಯ ಕಲೆಯನ್ನು ಮತ್ತೊಂದು ಜಿಲ್ಲೆಯವರು ಕಲಿಯಬೇಕು. ಅದಕ್ಕೆ ಬೇಕಾದ ಎಲ್ಲಾ ಪ್ರೋತ್ಸಾಹವನ್ನು ಅಕಾಡೆಮಿಯಿಂದ ನೀಡಲಾಗುವುದು ಎಂದು ಹೇಳಿದರು.

ಹಣ ಮಾಡುವುದು ದೊಡ್ಡದಲ್ಲ. ಕಳ್ಳತನ ಮಾಡಿಯೂ ಹಣ ಸಂಪಾದಿಸ ಬಹುದು. ಆದರೆ ಉತ್ತಮ ಹೆಸರು ಪಡೆಯುವುದು ಸುಲಭದ ಮಾತಲ್ಲ. ಕೋಟಿ ಕೊಟ್ಟರೂ ಸುಮ್ಮನೇ ಹೆಸರು ಪಡೆಯಲಾಗುವುದಿಲ್ಲ. ಆದ್ದರಿಂದ ತುಂಬಾ ಆಸೆಗಳನ್ನು ಇಟ್ಟುಕೊಂಡು ಹಣವನ್ನು ಬೆನ್ನತ್ತದೇ, ಅವಶ್ಯಕತೆಗಷ್ಟೇ ಹಣ ಸಂಪಾದನೆ ಮಾಡಬೇಕು. ಮುಖ್ಯವಾಗಿ ಉತ್ತಮ ಹೆಸರು ಸಂಪಾದಿಸಲು ಮುಂದಾ ಗಬೇಕು ಎಂದು ಸಲಹೆ ನೀಡಿದರು.

ಆನೇಕಲ್‌ ತಾಲ್ಲೂಕು ದೊಂಸಂದು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಆರತಿ ಜವರೇಗೌಡ ಮಾತನಾಡಿ, ಭಿಕ್ಷಾಟನೆಯನ್ನು ಯಾರೂ ಇಷ್ಟಪಟ್ಟು ಮಾಡುವುದಿಲ್ಲ. ಆದರೆ, ಅದರಿಂದ ನಾವುಗಳು ಹೊರಗೆ ಬರಬೇಕು. ನಮಗೆ ಹೀನಾಮಾನವಾಗಿ ನಿಂದಿಸಿ ನೀರು, ಊಟ, ಬಾಡಿಗೆ ಮನೆ ನೀಡಬಾರದು ಎಂದು ಹೇಳಿದ್ದ ಊರಿನಲ್ಲಿಯೇ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಅಧಿಕ ಮತಗಳನ್ನು ಪಡೆದು ಗೆದ್ದಿದ್ದೇನೆ. ಇದಕ್ಕೆ ನಾನು ಜನರ ಕಷ್ಟಕ್ಕೆ ಸ್ಪಂದಿಸಿದ್ದೇ ಕಾರಣ.  ನೀವು ಸಹ ವ್ಯವಹಾರ ಮತ್ತು ರಾಜಕೀಯ ಕ್ಷೇತ್ರಕ್ಕೆ ಬರಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸಿದಾಗ ಅವರೇ ನಮ್ಮ ಜೀವನದ ಸಾಧನೆಗೆ ದಾರಿ ದೀಪವಾಗುವರು ಎಂದರು.

ಪಾಲಿಕೆಯ ನಾಮನಿರ್ದೇಶಿತ ಸದಸ್ಯ ರಾದ ಹೆಚ್‌.ಸಿ. ಜಯಮ್ಮ ಮಾತನಾಡಿ, ದೈವ ಬಲದ ಮುಖೇನ ಸಾಧನೆ ಮಾಡು ತ್ತಿರುವ ನಿಮ್ಮ ಶ್ರಮ ಬಹಳಷ್ಟಿದೆ. ನೀವು ಕೂಡ ಐಎಎಸ್, ಐಪಿಎಸ್ ಸೇರಿದಂತೆ ಸರ್ಕಾರಿ ಉನ್ನತ ಹುದ್ದೆಯಲ್ಲೂ ಚಾಪು ಮೂಡಿಸುವ ಶಕ್ತಿ ನಿಮ್ಮಲ್ಲಿದೆ. ಹಾಗಾಗಿ ಯಾರನ್ನೂ ನಿರೀಕ್ಷಿಸದೇ ಸ್ವಂತಿಕೆಯಿಂದ ನಿಮ್ಮನ್ನು ನೀವು ಗುರುತಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಆಶಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಹೆಚ್‌.ಎಸ್‌. ಮಂಜುನಾಥ ಕುರ್ಕಿ, ಕುವೆಂಪು ಕನ್ನಡ ಭವನದಲ್ಲಿ ನಿಮ್ಮ ಸಮುದಾಯದ ಸಮಾವೇಶ, ನಿಮ್ಮ ಸಂಕಷ್ಟಗಳ ಕುರಿತ ವಿಚಾರ ಸಂಕಿರಣವನ್ನು ಮಾಡಬೇಕು. ಸಾಹಿತ್ಯ ಪರಿಷತ್ತು ನಿಮ್ಮ ಏಳಿಗೆಗೆ ಸಹಕಾರ ನೀಡಲಿದೆ ಎಂದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾ ಖಾನಂ ಮಾತನಾಡಿದರು. ಅಭಯ ಸ್ಪಂದನ ಕಾರ್ಯದರ್ಶಿ ಎಸ್‌. ಚೈತ್ರಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ಅಭಯ ಸ್ಪಂದನ ಸಂಘಟನೆಯಿಂದ ಆರತಿ ಜವರೇಗೌಡ ಹಾಗೂ ಬಿ. ಮಂಜಮ್ಮ ಜೋಗತಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ  ಬಿ. ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಂಜುನಾಥ ಕುಂದವಾಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಕೆ.ಹೆಚ್‌. ಗಂಗಾಧರ್‌, ಅಭಯ ಸ್ಪಂದನ ಅಧ್ಯಕ್ಷೆ ಉಮಾ, ಮಹಿಳಾ ಮುನ್ನಡೆಯ ಪವಿತ್ರಾ, ದುರ್ಗಾಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಘದ ಅಧ್ಯಕ್ಷೆ ಎಸ್‌.ಟಿ. ಮಂಜುಳಾ, ಅಂಗವಿಕಲರ ಆರ್‌ಪಿಒ ಟಾಸ್ಕ್‌ ರಾಜ್ಯ ಉಪಾಧ್ಯಕ್ಷೆ ಎಂ. ವಿಜಯಲಕ್ಷಿ ಸೇರಿದಂತೆ ಇತರರು ಇದ್ದರು.

ಕೆ.ಜಿ. ಮಂಜುನಾಥ ಸ್ವಾಗತಿಸಿದರು. ವಿ.ಎಚ್‌. ಗೀತಾ ವಂದಿಸಿದರು. ಹುಚ್ಚಂಗಿ ಸಿ. ಪ್ರಸಾದ್‌ ನಿರೂಪಿಸಿದರು.

error: Content is protected !!