ರಾಣೇಬೆನ್ನೂರು : ಪಕ್ಷ ರಾಜಕೀಯ ಚುನಾವಣೆಯಲ್ಲಿರಲಿ, ಅಭಿವೃದ್ಧಿಯಲ್ಲಿ ಅಲ್ಲ

ರಾಣೇಬೆನ್ನೂರು, ಫೆ.15- ಅಭಿವೃದ್ಧಿಯಲ್ಲಿ ರಾಜಕಾರಣವಿಲ್ಲ.  ಎಲ್ಲರೂ ಪಕ್ಷ ಮರೆತು ಒಟ್ಟಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ನಗರಸಭೆ ಸದಸ್ಯರಿಗೆ ತಮ್ಮ ವಿಭಾಗದ ಚಿಂತನೆ ಇದ್ದರೆ, ನಮಗೆ ನಮ್ಮ ಕ್ಷೇತ್ರದ ಅಭಿವೃದ್ಧಿಯ ಚಿಂತನೆ ಇರುತ್ತದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಚಿವ  ಆರ್. ಶಂಕರ್ ಹಾಗೂ ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ನಗರದಲ್ಲಿ ಎಸ್‌ಎಫ್‌ಸಿ ಅನುದಾನದಲ್ಲಿ ಹೊಲಿಗೆ ಯಂತ್ರ ಹಾಗೂ ಶೇ. 5 ರ ಅನುದಾನದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಿ ಅವರುಗಳು ಮಾತನಾಡಿದರು. 

ಹೊರಗಿನ ಅನೇಕ ರಾಜ್ಯಗಳ ಸರ್ಕಾರಿ ನೌಕರರಿಗೆ ಸಂಬಳ ಕೊಡದಂತಹ ಪರಿಸ್ಥಿತಿ ಇತ್ತು.  ಕೋವಿಡ್ ಹಾಗೂ ಮಹಾ ಮಳೆಯ  ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಸಹ ನಮ್ಮ ಸರ್ಕಾರ ನೌಕರರ ಹಿತ ಹಾಗೂ ಅಭಿವೃದ್ಧಿಯ ಮೂಲಕ ಜನರ ಹಿತ ಬಯಸಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಜಲಜೀವ ಯೋಜನೆ ಅನ್ವಯ  ನಮ್ಮ ಪ್ರಧಾನಮಂತ್ರಿಗಳ ಆಶಯದಂತೆ ದೇಶದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸರಬರಾಜು ಆಗಬೇಕು ಎನ್ನುವ ವಿಚಾರದಲ್ಲಿ  ವಿಶೇಷ ಆಸಕ್ತಿ ವಹಿಸಿರುವ ಮುಖ್ಯಮಂತ್ರಿಗಳು, ತಮ್ಮ ಅಧಿಕಾರವಧಿಯೊಳಗೆ ಅಂದರೆ 2023 ರೊಳಗೆ ರಾಜ್ಯದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಕೊಡಲು ನಿರ್ಣಯಿಸಿದ್ದಾರೆ ಎಂದರು.

50 ಲಕ್ಷದ ವಿಶೇಷ ಅನುದಾನದಲ್ಲಿ  ನಗರದ  ವಿವಿಧೆಡೆ 10 ಭಾಗಗಳಲ್ಲಿ ಶುದ್ಧ ಕುಡಿಯುವ ನೀರು ಘಟಕಗಳ ನ್ನು ನಿರ್ಮಿಸಲಾಗಿದೆ. ಒಂದನ್ನು ಹೊರತುಪಡಿಸಿ ಒಂಭತ್ತು ಕಾಮಗಾರಿಗಳು ಮುಗಿ ದಿದ್ದು ಇಂದು ಉದ್ಘಾಟಿಸಲಾಗಿದೆ. ಆ ಘಟಕವನ್ನು ಸಹ ಶೀಘ್ರವೇ ಉದ್ಘಾಟಿಸಲಾಗುವುದು  ಎಂದು ಶಾಸಕರು, ಸಚಿವರು ವಿವರಿಸಿದರು.

ಕಾರ್ಯಕ್ರಮದಲ್ಲಿ ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಪ್ರಾಧಿಕಾರದ ಅಧ್ಯಕ್ಷ  ಚೋಳಪ್ಪ ಕಸವಾಳ, ಸದಸ್ಯ ಮಲ್ಲಣ್ಣ ಅಂಗಡಿ, ಪೌರಾಯುಕ್ತ
ಡಾ. ಮಹಾಂತೇಶ್ ಮತ್ತಿತರರು ಪಾಲ್ಗೊಂಡಿದ್ದರು.  

error: Content is protected !!