ಹರಪನಹಳ್ಳಿ, ಏ.18- ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಮುಖಂಡರಾದ ಸುಜಾತ ಮಂಡಲಖಾನ್ ಅವರು ಪರಿಶಿಷ್ಟ ಜಾತಿಯವರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ತಾಲ್ಲೂಕು ಬಿಜೆಪಿ ಎಸ್ಸಿ ಮೋರ್ಚಾ ಪದಾಧಿಕಾರಿಗಳು ಖಂಡಿಸಿದ್ದಾರೆ.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಬಿಜೆಪಿ ಎಸ್.ಸಿ ಮೋರ್ಚಾ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಅವರಿಗೆ ಮನವಿ ಸಲ್ಲಿಸಿದರು.
ತೃಣಮೂಲ ಕಾಂಗ್ರೆಸ್ ಮುಖಂಡರಾದ ಸುಜಾತ ಮಂಡಲಖಾನ್ ಅವರು ಪರಿಶಿಷ್ಟ ಜಾತಿಯವರು ಭಿಕ್ಷುಕರು ಎಂದು ಜರಿದಿದ್ದಾರೆ. ಇದರಿಂದ ಪರಿಶಿಷ್ಟ ಜಾತಿಯ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ಮಾಡಿ ಅವಮಾನಿಸಿದ್ದಾರೆ. ಇದು ತೃಣಮೂಲ ಕಾಂಗ್ರೆಸ್ ನಾಯಕಿಯ ದುಷ್ಟ ಹಾಗೂ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಶತಮಾನಗಳಿಂದಲೂ ಪರಿಶಿಷ್ಟರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಶ್ರಮದ ದುಡಿಮೆಯನ್ನು ಆಶ್ರಯ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬರುತ್ತಿದ್ದಾರೆ. ಡಾ.ಅಂಬೇಡ್ಕರ್ ರಚಿಸಿರುವ ಸಂವಿಧಾನದಡಿ ಪ್ರಜೆಗಳ ಮತ ಭಿಕ್ಷೆಯಿಂದ ಜನಪ್ರತಿನಿಧಿಗಳಾಗುತ್ತಿದ್ದಾರೆ. ಅವರ ಬೆವರಿನ ಶ್ರಮಕ್ಕೆ ಇಂತಹ ರಾಜಕಾರಣಿಗಳು ಭಿಕ್ಷುಕರು ಎಂದು ಕರೆದು, ಅವಮಾನಿಸಿದ್ದನ್ನು ಖಂಡಿಸುತ್ತೇವೆ.
ತೃಣಮೂಲ ಕಾಂಗ್ರೆಸ್ ಮುಖಂಡರಾದ ಸುಜಾತ ಮಂಡಲಖಾನ್ ಅವರು ನೀಡಿರುವ ಹೇಳಿಕೆಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ತಾಲ್ಲೂಕು ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಎಂ.ಮಲ್ಲೇಶ್, ಉಪಾಧ್ಯಕ್ಷ ಬಂಗಿ ಚಂದ್ರಪ್ಪ, ಮುಖಂಡರಾದ ಡಿ.ಮಹಂತೇಶ್, ಕೊಟ್ರೇಶ ನಾಯ್ಕ್, ಮಾರುತಿ ನಾಯ್ಕ್, ಭೀಮಪ್ಪ ಮಜ್ಜಿಗೇರಿ, ಬಂಗಿ ರಾಮಪ್ಪ, ಪೂರ್ಯಾನಾಯ್ಕ್, ಬಸವರಾಜ, ಹಾಲಪ್ಪ, ಅಣ್ಣಪ್ಪ, ಅಂಜಿನಪ್ಪ, ಕೆ.ಜರೀಶ ನಾಯ್ಕ್, ವಸಂತ, ಜಗ್ಯನಾಯ್ಕ್ ಹಾಗೂ ಇತರರು ಭಾಗವಹಿಸಿದ್ದರು.