ಹರಪನಹಳ್ಳಿಯಲ್ಲಿ ಉಪನ್ಯಾಸಕ ದುರುಗೇಶ್ ಪೂಜಾರ್
ಹರಪನಹಳ್ಳಿ, ಏ.15- ಪ್ರತಿಯೊಬ್ಬ ಯುವಕರು ಅಂಬೇಡ್ಕರ್ ತತ್ವಗಳನ್ನು ಪಾಲಿಸಿ, ಸಂವಿಧಾನದ ಆಶಯಗಳಂತೆ ನಡೆದರೆ ದೇಶ ಸುಭಿಕ್ಷೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಎಸ್ಎಂಸಿಕೆ ಪದವಿ ಪೂರ್ವ ಕಾಲೇಜು ಉಪನ್ಯಾಸಕ ದುರುಗೇಶ್ ಪೂಜಾರ್ ಹೇಳಿದರು.
ತಾಲ್ಲೂಕಿನ ನೀಲಗುಂದ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಅಂಬೇಡ್ಕರ್ ಕೊಟ್ಟ ಮತದಾನದ ಹಕ್ಕನ್ನು ಹಣಕ್ಕಾಗಿ ಮಾರಿಕೊಂಡರೆ ಅಂಬೇಡ್ಕರ್ ತತ್ವ ಸಿದ್ದಾಂತಗಳಿಗೆ ದ್ರೋಹ ಬಗೆದಂತೆ. ಅಂಬೇಡ್ಕರ್ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದ್ದಾರೆ. ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಇಂತಹ ಜಯಂತಿಗಳು ಅರ್ಥಪೂರ್ಣವಾಗುತ್ತವೆ ಎಂದರು.
ದಮನಿತರು ಮತ್ತು ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯಗಳು ಇಲ್ಲದ ವೇಳೆಯಲ್ಲಿ ಅವರ ಧ್ವನಿಯಾಗಿ ಕೆಲಸ ಮಾಡಿ ಸಾಮಾಜಿಕ ಸಮಾನತೆಗೆ ನಾಂದಿ ಹಾಡಿದವರು ಅಂಬೇಡ್ಕರ್ ಮಹಾಮಾನವತಾವಾದಿ, ಮಹಾ ದಾರ್ಶನಿಕ, ಜನಪರ ಚಿಂತಕ, ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ನಾಯಕರು ಎಂದು ಸ್ಮರಿಸಿದರು.
ಉಪನ್ಯಾಸಕ ಮಂಜುನಾಥ್ ಮಾಚಿಹಳ್ಳಿ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಇಡೀ ಭಾರತಕ್ಕೆ ಸ್ಪೂರ್ತಿ ತುಂಬಿದ ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ನಾಯಕ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ಧೀಮಂತ ನಾಯಕ. ಇಂತಹ ಮೇರು ವ್ಯಕ್ತಿತ್ವ ಹೊಂದಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜನುಮ ದಿನವನ್ನು ಇವತ್ತು ಸರಳವಾಗಿ ಆಚರಿಸಲಾಗುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವತಂತ್ರ ಭಾರತಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರ. ಅಂಬೇಡ್ಕರ್ರವರನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಮನುಷ್ಯ ಮನುಷ್ಯನಾಗಿ ಕಾಣುವ ಸಂಸ್ಕೃತಿ ಬೆಳೆಸಿಕೊಳ್ಳುವ ಮೂಲಕ ಸಮಾನತೆ, ಭ್ರಾತೃತ್ವ, ಮನೋಭಾವನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹನುಮಂತಿಬಾಯಿ ಶೀಲ್ಯಾನಾಯ್ಕ, ಗ್ರಾಮ ಪಂಚಾಯ್ತಿ ಸದಸ್ಯರಾದ ಎಂ. ಮೈಲಪ್ಪ, ಶಾಂತಕುಮಾರ್, ತಳವಾರ ರಾಜಪ್ಪ, ಕೊಟ್ರೇಶ್, ಬಿಜೆಪಿ ಎಸ್.ಟಿ. ಮೋರ್ಚಾ ತಾಲ್ಲೂಕು ಅಧ್ಯಕ್ಷ ಮನೋಜ್ ತಳವಾರ್, ಕಾಂಗ್ರೆಸ್ ಮುಖಂಡ ಮಾಳ್ಗಿ ಹುಚ್ಚಪ್ಪ, ಕರ್ನಾಟಕ ಮಾದಿಗರ ಸಂಘದ ರಾಜ್ಯ ಪದಾಧಿಕಾರಿ ನಿಚ್ಚವ್ವನಹಳ್ಳಿ ರವಿಕುಮಾರ್, ಮಾಳ್ಗಿ ಸಣ್ಣಪ್ಪ, ಶಿಕ್ಷಕರಾದ ಮಾಳಗಿ ತಿಮ್ಮೇಶ್, ಅಶೋಕ್, ನಿಚ್ಚನಳ್ಳಿ ಸ್ವಾಮಿ, ಮಾಚಿಹಳ್ಳಿ ಶಾಸಪ್ಪರ ರಮೇಶ್, ಯಂಕ್ಟ್ಯಾರ್ ನಾಗರಾಜ್, ಬಾಳಪ್ನರ ಅಂಜಿನಪ್ಪ, ಮೂಕವ್ವರ ಹಾಲೇಶ್, ಮಾಚಿಹಳ್ಳಿ ಪ್ರಕಾಶ್, ಮಾಚಿಹಳ್ಳಿ ಮಾರುತಿ, ಮಾಚಿಹಳ್ಳಿ ಗದುಗಮ್ಮಪ್ಪರ ಹಾಲೇಶ್, ಕಂಚಿಕೇರಿ ಮಾರುತಿ, ಪೂಜಾರ್ ಕುಮಾರ್, ವೈ. ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.