ಹರಿಹರದ ತಾಲ್ಲೂಕು ಆಡಳಿತದ ಕಾರ್ಯಕ್ರಮದಲ್ಲಿ ಶಾಸಕ ಎಸ್. ರಾಮಪ್ಪ ಶ್ಲ್ಯಾಘನೆ
ಹರಿಹರ, ಏ.14- ಸಮಾನತೆಯ ಹರಿಕಾರ, ಅಸ್ಪೃಶ್ಯತೆ ನಿವಾರಣೆಗೆ ತಮ್ಮ ಜೀವನವನ್ನು ಮುಡಿ ಪಾಗಿಟ್ಟ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮತ್ತು ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯವನ್ನು ಶೀಘ್ರ ಕೈಗೊಳ್ಳು ವುದಾಗಿ ಶಾಸಕ ಎಸ್. ರಾಮಪ್ಪ ಭರವಸೆ ನೀಡಿದರು.
ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡದೆ ಇದ್ದಿದ್ದರೆ, ಸುಭದ್ರ ಭಾರತವನ್ನು ಕಾಣಲಿಕ್ಕೆ ಸಾಧ್ಯವಿರುತ್ತಿರಲಿಲ್ಲ. ಎಲ್ಲಾ ಜಾತಿಯ ಬಡವರ ಒಳಿತಿಗಾಗಿ ಅನುಕೂಲ ಮಾಡುವ ಉದ್ದೇಶದಿಂದ ಸಂವಿಧಾನ ರಚನೆ ಮಾಡಿದ್ದಾರೆ. ಆದರೆ ಕೆಲವು ಪಟ್ಟಭದ್ರ ವ್ಯಕ್ತಿಗಳು ಅದನ್ನು ತಿರುಚುವುದಕ್ಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಅದು ನಡೆಯುವುದಿಲ್ಲ ಎಂದು ಹೇಳಿದರು.
ದೇಶದ ಒಳಿತಿಗಾಗಿ ಶ್ರಮಿಸಿರುವ ಅಂಬೇಡ್ಕರ್ ನೆನಪಿಗಾಗಿ ನಗರದಲ್ಲಿ ಸಮುದಾಯ ಭವನ ಮತ್ತು ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದ್ದು, ಶೀಘ್ರವೇ ಕಾರ್ಯರೂಪಕ್ಕೆ ತರಲಾಗುವುದು. ರಾಜನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯವನ್ನು ಕೆಲವು ತಾಂತ್ರಿಕ ದೋಷಗಳಿಂದ ಸ್ಥಗಿತಗೊಳಿಸಲಾಗಿತ್ತು. ಅಲ್ಲಿನ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದೆ ಎಂದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತ ನಾಡಿ, ಸಮಾಜದಲ್ಲಿ ಬಡವರ, ಶೋಷಿತರ ಬೆಳವ ಣಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಂಬೇಡ್ಕರ್ ಅವರು ಮೌಢ್ಯ ಮತ್ತು ಅಂಧಕಾರದ ವಿರುದ್ಧ ಹೋರಾಟ ನಡೆಸಿ ಸಮಾನತೆಯ ಬದುಕಿಗೆ ಹೆಚ್ಚು ಮಹತ್ವ ನೀಡಿದರು. ಇವರನ್ನು ಇಡೀ ವಿಶ್ವವೇ ಮೆಚ್ಚಿ ಕೊಂಡಾಡಿದೆ. ಯುವ ಪೀಳಿಗೆಗೆ ಇವರ ಆದರ್ಶ ತತ್ವಗಳನ್ನು ತಿಳಿಸುವುದರ ಮೂಲಕ ಅವರ ಹಾದಿಯಲ್ಲಿ ಸಾಗುವಂತೆ ಮಾಡಿರಿ ಎಂದು ಹೇಳಿದರು.
ಎ.ಕೆ. ಭೂಮೇಶ್ ಮಾತನಾಡಿ, ಅಂಬೇಡ್ಕರ್ ಪ್ರಮುಖವಾಗಿ ಮಹಿಳೆಯರು ಎಲ್ಲಾ ರಂಗದಲ್ಲಿ ಸಮಾನವಾಗಿ ಬದುಕಬೇಕು ಎಂಬ ಧೋರಣೆ ಹೊಂದಿ, ಅವರಿಗೆ ಶಿಕ್ಷಣದ ಹಕ್ಕು ನೀಡಿದರು ಎಂದು ಹೇಳಿದರು.
ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ಮಾತನಾಡಿ ನಗರದ ಗಾಂಧಿ ವೃತ್ತದಲ್ಲಿ ಕಿರ್ಲೋಸ್ಕರ್ ಕಂಪನಿಯ ಮಾಲೀಕರ ಪುತ್ಥಳಿ ಇದ್ದು, ಅದನ್ನು ರಸ್ತೆ ಅಗಲೀಕರಣ ವೇಳೆ ತೆರವು ಮಾಡಲಾಯಿತು. ಅದನ್ನು ಅಲ್ಲೇ ನಿರ್ಮಾಣ ಮಾಡಿ, ಅದರ ಪಕ್ಕದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡುವುದು ಸೂಕ್ತ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖಂಡ ವೈ. ರಘುಪತಿ, ವಕೀಲ ಸುಭಾಷ್ ಚಂದ್ರ, ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಪಿ.ಜೆ. ಮಹಾಂತೇಶ್. ಹೆಚ್. ಸುಧಾಕರ್ ಇನ್ನಿತರರು ಮಾತನಾಡಿದರು.
ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮಿ, ಇಓ ಗಂಗಾಧರನ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸೈಯದ್ ನಾಸೀರ್ ಹುಸೇನ್, ಅಕ್ಷರ ದಾಸೋಹ ಇಲಾಖೆಯ ರಾಮಕೃಷ್ಣಪ್ಪ, ದಲಿತ ಸಮಾಜದ ಮುಖಂಡರಾದ ಹನುಮಂತಪ್ಪ, ಎ.ಕೆ. ಶಿವರಾಮ್, ಮಂಜುನಾಥ್ ಇನ್ನಿತರರಿದ್ದರು.