ಜಗಳೂರಿನಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಆಗ್ರಹ
ಜಗಳೂರು, ಫೆ.11- ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದು ಹಾಗೂ ತೈಲ ಬೆಲೆ ಏರಿಕೆ ಇಳಿಸಲಿ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಆಗ್ರಹಿಸಿದರು.
ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಶೇ.65 ಕ್ಕೂ ಅಧಿಕ ಜನಸಂಖ್ಯೆ ಆರ್ಥಿಕ ಅಭಿವೃದ್ದಿಗೆ ವ್ಯವಸಾಯವನ್ನೇ ಅವಲಂಬಿಸಿ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ.ಇಂತಹ ಲಕ್ಷಾಂತರ ರೈತರು, ಮೂರು ಕಾಯ್ದೆಗಳನ್ನು ಜಾರಿಗೊಳಿಸಿದ ಸರ್ವಾಧಿಕಾರಿ ಕೇಂದ್ರ ಸರ್ಕಾರದ ವಿರುದ್ಧ ಕಳೆದ 75 ದಿನಗಳಿಂದ ದೆಹಲಿ ಗಡಿಗಳಲ್ಲಿ ಚಳುವಳಿ ನಿರತರಾಗಿದ್ದಾರೆ. ಕೊರೆಯುವ ಚಳಿ, ಮಳೆ, ಗಾಳಿಗೆ ಸಿಲುಕಿ 155 ಕ್ಕೂ ಅಧಿಕ ರೈತರು ಮೃತ ಪಟಿದ್ದಾರೆ, ಅನ್ನದಾತರ ನೋವುಗಳಿಗೆ ಸ್ಪಂದಿಸದೆ ದರ್ಪ ಮೆರೆಯುತ್ತಿರುವುದು ಖಂಡನೀಯ ಎಂದರು.
ಕಳೆದ 73 ವರ್ಷಗಳಿಂದ ಕೇಳರಿಯದ ತೈಲಬೆಲೆ ಇಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಾಗಿದೆ. ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ 110 ಡಾಲರ್‌ನಿಂದ 50 ಡಾಲರ್‌ಗೆ ಇಳಿಮುಖವಾಗಿದ್ದರೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಡಿಮೆಯಾಗಿಲ್ಲ. ಇದರಿಂದ ರೈತರು, ಜನಸಾಮಾನ್ಯರು, ಕಾರ್ಮಿಕ ವರ್ಗ ತತ್ತರಿಸಿದೆ ಎಂದರು.
ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಕೇಂದ್ರ ಸರ್ಕಾರ ಮಂತ್ರಿಗಳ ಜೊತೆ 11 ಸುತ್ತಿನ ಮಾತುಕತೆ ನಡೆಸಿದರೂ ರೈತವಿರೊಧಿ ಕಾಯ್ದೆಗಳ ಬಗ್ಗೆ ಚಕಾರ ಎತ್ತಿಲ್ಲ. ಅಲ್ಲದೆ ಪ್ರಧಾನಿ ಮೋದಿ ಅವರ `ಮನ್ ಕಿ ಬಾತ್’ ನಲ್ಲಿ ಕಾಯ್ದೆಗಳು ಸರಿಯಾಗಿವೆ ಎಂಬ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ರೈತ ಮುಖಂಡರ ಸಮ್ಮುಖದಲ್ಲಿ ಸಭೆ ಕರೆದು ಚರ್ಚೆ ನಡೆಸಬೇಕು ಎಂದರು.
ಹೊರಕೆರೆ ಮಾರಮ್ಮನ ದೇವಸ್ಥಾನದಿಂದ ಮೆರವಣಿಗೆ ನಡೆಸಿ, ಮಹಾತ್ಮ ಗಾಂಧಿ ವೃತ್ತದಿಂದ, ಅಂಬೇಡ್ಕರ್ ವೃತ್ತದ ಮೂಲಕ ತಾಲ್ಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಬ್ಲಾಕ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ತಾ.ಪಂ ಸದಸ್ಯ ಕುಬೇಂದ್ರಪ್ಪ, ಜಿ.ಪಂ. ಮಾಜಿ ಅಧ್ಯಕ್ಷೆ ನಾಗರತ್ನಮ್ಮ, ಮುಖಂಡರಾದ ಬಿ.ಲೋಕೇಶ್, ತಿಪ್ಪೇಸ್ವಾಮಿ, ರೇವಣ್ಣ, ಯು.ಜಿ.ಶಿವಕುಮಾರ್, ಸಿದ್ದಪ್ಪ, ಚಿತ್ತಪ್ಪ, ವಿಜಯ್ಕೆಂಚೊಳ್, ಶಕೀಲ್ ಅಹಮ್ಮದ್, ರಮೇಶ್, ಓಬಳೇಶ್, ಮಹಿಳಾ ಕಾಂಗ್ರೆಸ್‌ನ ಸಾವಿತ್ರಮ್ಮ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.