ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಯರಿಸ್ವಾಮಿ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಯರಿಸ್ವಾಮಿ - Janathavaniಜಗಳೂರು, ಫೆ. 7- ಬರುವ ಮಾರ್ಚ್ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಹತ್ತನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಎನ್.ಟಿ. ಯರಿಸ್ವಾಮಿ ಅವರಿಗೆ ಜಿಲ್ಲಾ ಕಸಾಪ ದಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು.

ಪಟ್ಟಣದ ಗಂಗಾಂಭಿಕಾ ಬಡವಾಣೆಯಲ್ಲಿನ  ಯರಿಸ್ವಾಮಿ ಅವರ ನಿವಾಸಕ್ಕೆ ಆಗಮಿಸಿದ ಜಿಲ್ಲಾ ಕಸಾಪ ಅಧ್ಯಕ್ಷರ ನೇತೃತ್ವದ ತಂಡ  ಸಾಂಪ್ರದಾಯಿಕ ಅಹ್ವಾನ‌ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕ.ಸಾ.ಪ. ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ಕುರ್ಕಿ, ಕೊರೊನ ಆಕ್ರಮಣದಿಂದ ಸಾಹಿತ್ಯಾಭಿರುಚಿ ಕಾರ್ಯಕ್ರಮಗಳಿಗೆ ಹಿನ್ನಡೆಯಾಗಿತ್ತು. ಇದೀಗ ಜಿಲ್ಲಾ ಸಮ್ಮೇಳನದ ಮೂಲಕ  ಸಾಹಿತ್ಯ ಕ್ಷೇತ್ರಕ್ಕೆ ಪುನಃ ಮೆರಗು ಬರಲಿದೆ ಎಂದರು.

ಜಗಳೂರು ಬರದ ನಾಡಾಗಿದ್ದರೂ ಭಾವನಾತ್ಮಕ ನೆಲೆಗಟ್ಟಿನಲ್ಲಿ ವೈವಿಧ್ಯಮಯ ಸಾಹಿತ್ಯದ ಮಜಲುಗಳನ್ನು ಒಳಗೊಂಡಿದೆ. ಬಯಲು ಸೀಮೆಯ ಪುತ್ರರಾಗಿರುವ ಯರಿಸ್ವಾಮಿ ಅವರು ಸಾಮಾಜಿಕ ಮತ್ತು ಸಮಕಾಲೀನ ಸಮಸ್ಯೆಗಳನ್ನು ಸಮೀಪದಿಂದ ಕಂಡಿರುವಂತಹ ವ್ಯಕ್ತಿ. ಇಂತಹವರನ್ನು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸರ್ವಾನುಮತದಿಂದ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು.

ಕ.ಸಾ.ಪ ನಿಕಟಪೂರ್ವ  ಅಧ್ಯಕ್ಷ ಎ.ಆರ್. ಉಜ್ಜಿನಪ್ಪ ಮಾತನಾಡಿ, ಇಳಿ ವಯಸ್ಸಿನಲ್ಲಿಯೂ ಸೃಜನಶೀಲ ಸಾಹಿತಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಎನ್.ಟಿ. ಎರಿಸ್ವಾಮಿ ಅವರು  ಕನ್ನಡ ನೆಲದ  ಜ್ವಲಂತ ಸಮಸ್ಯೆಗಳ ಧ್ವನಿಯಾಗಲಿದ್ದಾರೆ ಎಂದರು.

ಸಮ್ಮೇಳನದ ಅಧ್ಯಕ್ಷರಾದ ಎನ್.ಟಿ. ಯರಿಸ್ವಾಮಿ ಮಾತನಾಡಿ, ನಾನು  ಬಾಲ್ಯ ಜೀವನದಲ್ಲಿ  ಕಂಡಂತಹ ಪ್ರಾಯೋಗಿಕ ಅನುಭವಗಳೇ ಸಾಹಿತ್ಯದ ಬೌದ್ದಿಕ ಚಿಂತನೆಯ ತಳಹದಿಯಾದವು. ಗ್ರಾಮೀಣ ಸೊಗಡಿನ ಕೌಟುಂಬಿಕ ಹಿನ್ನೆಲೆಯ ನನಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಜವಾಬ್ದಾರಿ ನೀಡಿರುವುದು ನನಗೆ ಸಂತಸ ತಂದಿದೆ ಎಂದರು.

ಹಿರಿಯ ಸಾಹಿತಿ, ಕನ್ನಡ ಉಪನ್ಯಾಸಕ  ಎಂ. ಬಸವಪ್ಪ ಮಾತನಾಡಿ ಯರಿಸ್ವಾಮಿ ಯವರ ಆಯ್ಕೆ ಜಗಳೂರು ತಾಲ್ಲೂಕಿನ ಎಲ್ಲಾ ಕನ್ನಡ ಪ್ರೇಮಿಗಳಿಗೆ ಸಂತಸ ತಂದಿದೆ ಎಂದರು. 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಯಲಾಟ ಅಕಾಡೆಮಿ ಸದಸ್ಯ ರಾದ ಎನ್.ಎನ್.ರಾಜ್, ಷಣ್ಮುಖಪ್ಪ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ದಿಂಡೆಪ್ಪ, ಗೀತಾಂಜಲಿ ಪುಸ್ತಕ ಪ್ರಕಾಶಕ ಮೋಹನ್, ಸಾಹಿತಿಗಳಾದ ಡಿ.ಸಿ.ಮಲ್ಲಿಕಾರ್ಜುನ್, ಎಂ.ಎಸ್.ಬಸವೇಶ್, ಬಾಬುರೆಡ್ಡಿ, ಕಸಾಪ ತಾಲ್ಲೂಕು ಅಧ್ಯಕ್ಷ ಹಜರತ್ ಅಲಿ, ಪದಾಧಿಕಾರಿಗಳಾದ ಎಂ.ಡಿ.ಆಂಜನೇಯ, ಡಿ.ಟಿ.ಆದಂ, ಕೆ.ಸುಜಾತ ಮುಂತಾದವರು ಉಪಸ್ಥಿತರಿದ್ದರು.

error: Content is protected !!