ಹೊನ್ನಾಳಿ, ಫೆ.5- ರಾಜ್ಯದ ಯಾದಗಿರಿ, ಕೊಡಗು, ಮೈಸೂರು ಹಾಗೂ ಬೀದರ್ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರುವ ಕುರುಬರ ಎಸ್ಟಿ ಮೀಸಲಾತಿ ಸೌಲಭ್ಯವನ್ನು ಇಡೀ ರಾಜ್ಯಕ್ಕೇ ವಿಸ್ತರಿಸಬೇಕು ಎಂದು ಹೊನ್ನಾಳಿ ತಾಲ್ಲೂಕು ಎಸ್ಟಿ ಮೀಸಲಾತಿ ಹೋರಾಟ ಸಮಿತಿ ಮಹಿಳಾ ಘಟಕದ ಅಧ್ಯಕ್ಷರಾದ ಪಂಕಜಾ ಅರುಣ್ ಕುಮಾರ್ ಹೇಳಿದರು.
ನಾಡಿದ್ದು ದಿನಾಂಕ 7 ರಂದು ನಡೆಯುವ ಬೆಂಗಳೂರು ಎಸ್ಟಿ ಹೋರಾಟ ಸಮಾವೇಶದ ಹಿನ್ನೆಲೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೋರಾಟಕ್ಕೆ ತಾಲ್ಲೂಕಿನ ಹಾಲು ಮತ ಮಹಿಳಾ ಪದಾಧಿಕಾರಿಗಳ ಸಮಿತಿಯು ಕೈ ಜೋಡಿಸಿ, ಭಾಗವಹಿಸಲಿದ್ದಾರೆ ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಸ್. ಸೌಮ್ಯ ಹಾಗೂ ನಿರ್ಮಲ ಮಾತನಾಡಿ, ಹೊನ್ನಾಳಿಯಿಂದ ಮಹಿಳಾ ಸಂಘಟನೆಯ 40 ಜನ ಪದಾಧಿಕಾರಿಗಳು ಬೆಂಗಳೂರು ಸಮಾವೇಶಕ್ಕೆ ಹೋಗುವ ಮೂಲಕ ಹೋರಾಟಕ್ಕೆ ಬಲ ತುಂಬಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಎಸ್ಟಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಹೇಮಾ ಆಂಜನೇಯ, ಅಶ್ವಿನಿ ರುದ್ರೇಶ್, ಉಪಾಧ್ಯಕ್ಷೆ ಕರಿಬಸಮ್ಮ ರಾಜಪ್ಪ, ಸಂಘಟನಾ ಕಾರ್ಯದರ್ಶಿ ಸುಧಾ ಮರಿಸಿದ್ದಪ್ಪ, ಸಂಚಾಲಕಿ ಶೈಲಜಾ ಇನ್ನಿತರರಿದ್ದರು.