ಕಾಶೀಪುರ ಕೆನರಾ ಬ್ಯಾಂಕ್‍ ಶಾಖೆ ವಿಲೀನ : ಪ್ರತಿಭಟನೆ

ದಾವಣಗೆರೆ, ಫೆ.4- ತಾಲ್ಲೂಕಿನ ಕಾಶೀಪುರದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯನ್ನು ಲೋಕಿಕೆರೆಯ ಬ್ಯಾಂಕ್‍ನೊಂದಿಗೆ ವಿಲೀನಗೊಳಿಸುವುದನ್ನು ಖಂಡಿಸಿ ಕಾಶೀಪುರ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಗುರುಮೂರ್ತಿ, ಕಾಶೀಪುರ ಕೆನರಾ ಬ್ಯಾಂಕ್ ಶಾಖೆ ಕಳೆದ 5 ವರ್ಷಗಳ ಹಿಂದೆ ಆರಂಭಗೊಂಡಿದ್ದು, 5 ಕೋಟಿ ರೂ. ಠೇವಣಿ ಹೊಂದಿರುವ ಬ್ಯಾಂಕ್ ಇಲ್ಲಿಯವರೆಗೂ 19 ಕೋಟಿ 83 ಲಕ್ಷ ರೂ ವಹಿವಾಟು ನಡೆಸಿದೆ. ಸುಮಾರು 2 ಕೋಟಿ ರೂ. ಬಂಗಾರದ ಮೇಲೆ ಸಾಲ ನೀಡಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘದ 120 ಜನ ಕೂಡ ತಿಂಗಳಿಗೆ ಎರಡು ಬಾರಿ ಬಟವಾಡೆ ಮಾಡಿಕೊಳ್ಳುತ್ತಿದ್ದಾರೆ. ನೆಟ್‍ವರ್ಕ್ ಸಮಸ್ಯೆಯ ಕಾರಣ ಮುಂದೊಡ್ಡಿ ಬ್ಯಾಂಕ್ ಮುಚ್ಚಲಾಗುತ್ತಿದೆ ಎಂದು ಆರೋಪಿಸಿದರು.

ಕಾಶೀಪುರದಲ್ಲಿ ಮುಚ್ಚುವ ಕೆನರಾ ಬ್ಯಾಂಕ್ ಶಾಖೆಯನ್ನು ಲೋಕಿಕೆರೆಯಲ್ಲಿರುವ ಅದೇ ಕೆನರಾ ಬ್ಯಾಂಕಿನಲ್ಲಿ ವಿಲೀನಗೊಳಿಸಲಾಗುತ್ತಿದೆ. ಇದರಿಂದ ಕಾಶೀಪುರದಲ್ಲಿ ಖಾತೆ ಹೊಂದಿದ್ದ ರಾಮಗೊಂಡನಹಳ್ಳಿ, ಮಳಲಕೆರೆ, ಗೋಪನಾಳು, ಅತ್ತಿಗೆರೆ, ರಾಜುಗಾರು ಕ್ಯಾಂಪ್, ವೆಂಕಟೇಶ್ವರ ಕ್ಯಾಂಪ್‍ನ 2 ಸಾವಿರಕ್ಕೂ ಅಧಿಕ ಜನರಿಗೆ ತೊಂದರೆಯಾಗಲಿದೆ. 6 ಕಿ.ಮಿ. ದೂರವಿರುವ ಲೋಕಿಕೆರೆಗೆ ಬ್ಯಾಂಕಿನ ವ್ಯವಹಾರಕ್ಕಾಗಿ ತೆರಳಲು ಬಸ್ ಅಥವಾ ಆಟೋ ವ್ಯವಸ್ಥೆ ಇಲ್ಲ. ಇದರಿಂದ ವಯೋವೃದ್ಧರು ಮತ್ತು ಅಂಗವಿಕಲರು ಪಿಂಚಣಿ ಪಡೆಯಲು ಇನ್ನು ಮುಂದೆ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಈ ಸಂಬಂಧ ಈಗಾಗಲೇ ಸಂಸದರು, ಶಾಸಕರು ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಬ್ಯಾಂಕನ್ನು  ಕಾಶೀಪುರದಲ್ಲಿ ಉಳಿಸಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಪಾಲಾಕ್ಷಪ್ಪ, ರುದ್ರಪ್ಪ, ಮಾದಪ್ಪ, ಎಸ್.ಡಿ.ಗಿರೀಶ್ ಓಂಕಾರ ಮೂರ್ತಿ, ಜಗದೀಶ್, ವಜ್ರಮುನಿ, ಸಾದರಹಳ್ಳಿ ವಿನಯ್, ಗೌಡ್ರ ಮಹೇಶ್ವರಪ್ಪ, ಎಸ್.ಎಂ.ವಿಶ್ವನಾಥ್, ಮೇಷ್ಟ್ರು ಈಶಣ್ಣ, ಪಂಚಾಕ್ಷರಿ ಗ್ರಾಪಂ ಸದಸ್ಯೆ ಮಂಜುಳಾ ನಾಗರಾಜ್, ಮಂಜುಳಾ ಚಂದ್ರಶೇಖರ್, ಕಮಲಮ್ಮ, ಗೌರಮ್ಮ, ಸಂಗಮ್ಮ ಸೇರಿದಂತೆ, ಇತರರು ಭಾಗವಹಿಸಿದ್ದರು.

error: Content is protected !!