ಹರಿಹರ, ಫೆ.4- ನಗರದ ಶ್ರೀ ರಾಮಕೃಷ್ಣಾಶ್ರಮದ ವತಿಯಿಂದ ಸ್ವಾಮಿ ವಿವೇಕಾನಂದರ 159 ನೇ ಜಯಂತಿ ಅಂಗವಾಗಿ ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು, ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಮದ ಅಧ್ಯಕ್ಷರಾದ ಶ್ರೀ ಶಾರದೇಶಾನಂದ ಸ್ವಾಮಿಗಳು ಮಾತನಾಡಿ, ಶಿವಭಾವದಲ್ಲಿ ಜನ ಸೇವೆ ಮಾಡುವುದೇ ನಿಜವಾದ ಧರ್ಮ. ನಿಜವಾದ ಪೂಜೆ ಎಂದರೆ ಮೂರ್ತಿಯಲ್ಲಿ ದೇವರನ್ನು ಕಂಡು ಪೂಜೆ ಮಾಡುವುದರ ಜೊತೆಗೆ ಮನುಷ್ಯನಲ್ಲಿರುವ ದೇವರ ಪೂಜೆ ಮಾಡಬೇಕು ಎಂಬ ನವನೂತನ ಸಂದೇಶವನ್ನು ವಿವೇಕಾನಂದರು ನೀಡಿದ್ದಾರೆ ಎಂದರು.
ಹಳೆಯ ವೇದಗಳು ಮಾತೃದೇವೋಭವ, ಪಿತೃದೇವೋಭವ, ಅತಿಥಿ ದೇವೋಭವ ಎಂದಿವೆ. ಈ ಕಲಿಯುಗದಲ್ಲಿ ಹೊಸ ದೇವರನ್ನು ನಾನು ಹೇಳುವುದಕ್ಕಿಂತ ರೋಗಿ ದೇವೋಭವ, ದೀನದೇವೋಭವ ಆಗಬೇಕು ಎಂದು ಕರೆ ನೀಡಿದರು.
ಈ ಆದರ್ಶದ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹಣ್ಣು ಹಾಗೂ ಬಿಸ್ಕೆಟ್‌ಗಳನ್ನು ನೀಡಿ ಸೇವೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಶಾರದಾದೇವಿ, ಶ್ರೀಧರ ಭೂತೆ, ಪ್ರಮೋದ ಬೀಳಗಿ, ಗಗನ ಹಾಗೂ ಆಸ್ಪತ್ರೆಯ ಸಿಬ್ಬಂದಿಯವರು, ಶೋಭಾ, ಲಿಂಗರಾಜ್, ಸುಮಂಗಳ, ಸವಿತಾ, ಗೀತಾ, ರೂಪ, ಶಶಿಕಾಂತ್ ಇನ್ನಿತರರಿದ್ದರು.