ಬಾಪೂಜಿ ಹಾಲ್ ಕಟ್ಟಡ ನಿರ್ಮಾಣ : ಅನುದಾನಕ್ಕೆ ಮನವಿ

ಡಿಸಿ ಕಚೇರಿಗೆ ಮಲೇಬೆನ್ನೂರು ಪುರಸಭೆ ಸದಸ್ಯರ ನಿಯೋಗ

ಮಲೇಬೆನ್ನೂರು, ಏ.6- ಪಟ್ಟಣದಲ್ಲಿ ಮಹಾತ್ಮ ಗಾಂಧೀಜಿ ಅವರು ವಿಶ್ರಾಂತಿ ಪಡೆದಿದ್ದ ಬಾಪೂಜಿ ಹಾಲ್‌ ಕಟ್ಟಡದ ಅಭಿವೃದ್ಧಿಗೆ 2018-19 ಹಾಗೂ 2019-20ನೇ ಸಾಲಿನ 14ನೇ ಹಣ ಕಾಸು ಅನುದಾನದಡಿ ಮಂಜೂರಾದ ಕ್ರಿಯಾ ಯೋಜನೆಯಲ್ಲಿ ಅವಕಾಶ ಮಾಡಿಕೊಡುವಂತೆ ಪುರಸಭೆ ನಿಯೋಗ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

2018-19ನೇ ಸಾಲಿನ 14 ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಲ್ಲಿ ಮಂಜೂರಾ ಗಿರುವ ಘನತ್ಯಾಜ್ಯ ವಸ್ತು ವಿಲೇವಾರಿ ಜಾಗದ ಅಭಿವೃದ್ಧಿಗೆ ಇರುವ 16.57 ಲಕ್ಷ ರೂ. ಮತ್ತು 2019-20ನೇ ಸಾಲಿನ ಅನುದಾನದಲ್ಲಿ ಮಂಜೂರಾಗಿರುವ ಘನತ್ಯಾಜ್ಯ ವಸ್ತು ನಿರ್ವಹಣೆ ಜಾಗದ ಖರೀದಿಗಾಗಿ ಇರುವ 35 ಲಕ್ಷ ರೂ.ಗಳ ಜೊತೆಗೆ ಬಾಪೂಜಿ ಹಾಲ್ ದುರಸ್ತಿ ಕಾಮಗಾರಿಗಾಗಿಯೇ ಇಟ್ಟಿರುವ 9.40 ಲಕ್ಷ ರೂ. ಸೇರಿಸಿ, ಓಟ್ಟು 60.97 ಲಕ್ಷ ರೂ. ಅನುದಾನವನ್ನು ಬಾಪೂಜಿ ಹಾಲ್ ಕಟ್ಟಡ ಅಭಿವೃದ್ಧಿಗಾಗಿ ಬಳಸಲು ಅನುಮತಿ ನೀಡಿದರೆ, ಪಾಳು ಬಿದ್ದಿರುವ ಕಟ್ಟಡವನ್ನು ಕಚೇರಿಗಳ ಸಂಕೀರ್ಣ ಮಾಡಿ ಲೈಬ್ರರಿ, ಪತ್ರಿಕಾ ಭವನ ಸೇರಿದಂತೆ ಇನ್ನಿತರೆ ಕಚೇರಿಗಳಿಗೆ ಅವಕಾಶ ಮಾಡಿಕೊಡಬಹುದು ಎಂದು ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ನಿಯೋಗದ ಪರವಾಗಿ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಬಾಪೂಜಿ ಹಾಲ್ ಅಭಿವೃದ್ಧಿ ಆಗಬೇಕೆಂಬ ನಿಮ್ಮ ಕಳಕಳಿಗೆ ನನ್ನ ಸಹಮತ ಇದೆ. ಈಗ ಮಂಜೂ ರಾಗಿರುವ ಕ್ರಿಯಾ ಯೋಜನೆಯ ಅನುದಾನವನ್ನು ಬದಲಿ ಮಾಡುವುದಕ್ಕೆ ಅವಕಾಶ  ಇದೆಯೇ ಎಂಬುದರ ಬಗ್ಗೆ ನಗರಾಭಿವೃದ್ಧಿ ಯೋಜನಾ ನಿರ್ದೇಶಕರೊಂದಿಗೆ ಚರ್ಚಿಸಿ, ತಿಳಿಸುತ್ತೇನೆಂದು ನಿಯೋಗಕ್ಕೆ ಭರವಸೆ ನೀಡಿದರು.

ಎರಡನೇ ಹಂತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ದಾವಣಗೆರೆ ಜಿಲ್ಲೆಯಲ್ಲಿ 50 ಜನರಿಗೆ ಸೋಂಕು ದೃಢಪಟ್ಟಿರುವುದರಿಂದ ಮುಂದೆ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪಟ್ಟಣದಲ್ಲಿ ಅರಿವು ಮೂಡಿಸಿ. ಮಾಸ್ಕ್ ಹಾಕದವರಿಗೆ ದಂಡ ಹಾಕಿ ಮತ್ತು 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸುವ ಬಗ್ಗೆ ಆಯಾ ವಾರ್ಡಿನ ಸದಸ್ಯರೇ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು, ಸದಸ್ಯರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎ. ಆರೀಫ್ ಅಲಿ ಅವರು ಪಟ್ಟಣದ ಘನತ್ಯಾಜ್ಯ ಹಾಕುವುದಕ್ಕೆ ಸರ್ಕಾರಿ ಗೋಮಾಳ ಜಾಗ ನೀಡುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಪುರಸಭೆ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ್ ಸ್ವಾಮಿ, ಸದಸ್ಯರಾದ ಬಿ. ಸುರೇಶ್, ಪಿ.ಆರ್. ರಾಜು, ಜಿ.ಹೆಚ್. ಮಂಜಪ್ಪ, ಎ.ಕೆ. ಲೋಕೇಶ್ ಮತ್ತು ಭೋವಿ ಕುಮಾರ್, ಆದಾಪುರ ವಿಜಯಕುಮಾರ್  ನಿಯೋಗದಲ್ಲಿದ್ದರು.

error: Content is protected !!