ದಾವಣಗೆರೆ, ಜ.31- ಪೆಟ್ರೋಲಿಯಂ ಉತ್ಪನ್ನಗ ಳನ್ನು ಸಂರಕ್ಷಿಸುವಂತೆ ನಗರದಲ್ಲಿ ಇಂದು ಭಾರತ್ ಪೆಟ್ರೋಲಿಯಂ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಸೈಕಲ್ ಜಾಥಾ ಮೂಲಕ ಜನಜಾಗೃತಿ ಮೂಡಿಸಲಾಯಿತು.
ಶಾಮನೂರು ರಸ್ತೆಯಲ್ಲಿರುವ ಭರತ್ ಪೆಟ್ರೋಲ್ ಬಂಕ್ ಬಳಿ ಜಾಥಾಕ್ಕೆ ನಗರ ಪಾಲಿಕೆ ಆಯುಕ್ತ ರವೀಂದ್ರ ಮಲ್ಲಾಪುರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಈ ಸಂಪನ್ಮೂಲವು ಪ್ರಕೃತಿಯಲ್ಲಿ ಸೀಮಿತವಾದ ಕಾರಣ ಪೆಟ್ರೋಲಿಯಂ ಉತ್ಪನ್ನಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೂ ಈ ಸಂಪನ್ಮೂಲ ಸಿಗುವಂತಾಗಲು ಪ್ರತಿಯೊಬ್ಬರೂ ಇಂಧನವನ್ನು ಸಂರಕ್ಷಿಸಲು ಮುಂದಾಗಬೇಕೆಂದರು.
ಎಸ್ಪಿ ಹನುಮಂತರಾಯ ಸೈಕಲ್ ಓಡಿಸುವ ಮೂಲಕ ಜಾಥಾದಲ್ಲಿ ಭಾಗವಹಿಸಿದ್ದರು. ಜಾಥಾ ನಗರದ ಗುಂಡಿ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸೈಕಲ್ ಓಡಿಸುವುದರಿಂದ ಆರೋಗ್ಯ ವೃದ್ಧಿಸುವುದಲ್ಲದೇ, ಪರಿಸರ ಸಹ ಸ್ವಚ್ಛವಾಗಿರುವುದು ಹಾಗೂ ಇಂಧನವನ್ನೂ ಸಹ ಉಳಿಸಿದಂತಾಗುತ್ತದೆ ಎಂದು ಎಸ್ಪಿ ತಿಳಿಸಿದರು.
ಫಿಟ್ ಇಂಡಿಯಾ ಆಂದೋಲನವನ್ನು ಉತ್ತೇಜಿ ಸುವ ಮೂಲಕ ನಾವು ಮಾಲಿನ್ಯವನ್ನು ಕಡಿಮೆ ಮಾಡಬ ಹುದು ಮತ್ತು ವೈಯಕ್ತಿಕ ಫಿಟ್ನೆಸ್ ಅನ್ನು ಸುಧಾರಿಸ ಬಹುದು ಎಂದು ತೈಲ ಸಂರಕ್ಷಣೆಯ ಮಹತ್ವದ ಬಗ್ಗೆ ಏರಿಯಾ ಮ್ಯಾನೇಜರ್ ಅವೇಸ್ ಕಾಶಿಫ್ ಹೇಳಿದರು.
ಆರ್ ಟಿಓ ಅಧಿಕಾರಿ ಶ್ರೀಧರ್ ಮಲ್ನಾಡ್, ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತ ಚಾಲನೆಯಿಂದ ಅಪಘಾತವನ್ನು ತಪ್ಪಿಸಬಹುದೆಂದರು.
ಜಾಥಾದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಸೈಕಲ್ ಪ್ರಿಯರು ಭಾಗವಹಿಸಿದ್ದರು.