ರಾಣೇಬೆನ್ನೂರು, ಜ.17- ಈಗಾಗಲೇ ಇರುವ ಎಸ್.ಟಿ. ಮೀಸಲಾತಿಯನ್ನು ಕುರುಬರಿಗೂ ಕೊಡಿ ಎಂದು ಸಾಂವಿಧಾನಿಕ ಹಕ್ಕು ಪಡೆಯಲು ಈ ಹೋರಾಟ ಎಂದು ಕಾಗಿನೆಲೆ ಕನಕ ಪೀಠದ ಶ್ರೀ ನಿರಂಜನಾ ನಂದಪುರಿ ಸ್ವಾಮಿಗಳು ನುಡಿದರು.
ಶ್ರೀ ಗಳು ಪಾದಯಾತ್ರೆ ಮೂಲಕ ಕಾಗಿನೆಲೆಯಿಂದ ಹೊರಟು ಇಂದು ರಾಣೇಬೆನ್ನೂರಿಗೆ ಆಗಮಿಸಿ ಹೊರಬೀರಪ್ಪನ ಗುಡಿಯಲ್ಲಿ ಜಾಗೃತಿ ಸಭೆ ನಡೆಸಿದರು.
ಈಗಾಗಲೇ ಈ ವಿಷಯವಾಗಿ ಕೇಂದ್ರದ ಮಂತ್ರಿಗಳಾದ ಜೋಷಿ, ಸಂತೋಷ್ ಹಾಗೂ ರೇಣುಕಾ ಅವರುಗಳಿಗೆ ಮನವಿ ಸಲ್ಲಿಸಲಾಗಿದೆ. ಅದನ್ನೇ ರಾಜ್ಯದ ಮುಖ್ಯಮಂತ್ರಿಗಳಿಗೂ ಕೊಟ್ಟಿದ್ದೇವೆ. ರಾಜ್ಯ ಸರ್ಕಾರ ನಮ್ಮ ಮನವಿಯನ್ನು ಶಿಫಾರಸ್ಸು ಮಾಡಿ ಕಳಿಸಿದ ಮೇಲೆ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವುದು. ಈ ಪ್ರಕ್ರಿಯೆಯು ಶೀಘ್ರ ವಾಗಿ ನಡೆಯಬಹುದು ಎಂದು ಸ್ವಾಮೀಜಿ ಭರವಸೆಯ ಮಾತುಗಳನ್ನು ನುಡಿದರು.
ಈ ಹೋರಾಟದಲ್ಲಿ ರಾಜಕೀಯ ಇಲ್ಲ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಎಲ್ಲ ಪಕ್ಷದ ಮುಖಂಡರು ಇದ್ದಾರೆ. ಇಲ್ಲಿ ರಾಜ ಕಾರಣ ಇಲ್ಲ. ಕೇವಲ ಸಾಮಾಜಿಕ ಕಳಕಳಿ ಇದೆ ಎಂದು ಶ್ರೀ ಗಳು ನುಡಿದಾಗ ಜನರ ಕೇಕೆ, ಸಿಳ್ಳೆ, ಕರತಾಡನಗಳು ಮೊಳಗಿದವು.
ಸಿದ್ರಾಮಯ್ಯ ಕುರುಬರ ನಾಯಕರಲ್ಲ !
ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೇವಲ ಕುರುಬರ ನಾಯಕರಲ್ಲ. ಅವರು ಜಾತ್ಯತೀತ ಮುಖಂಡ, ಅಹಿಂದ ನಾಯಕರು. ಅವರನ್ನು ಜೊತೆಗೆ ಕರೆದುಕೊಂಡು ಒಂದೇ ಜಾತಿಗೆ ಸೀಮಿತಗೊಳಿಸುವುದಿಲ್ಲ. ಪ್ರಾರಂಭದ ಲ್ಲಿಯೇ ಅವರು ನಮ್ಮನ್ನು ಬೆಂಬಲಿ ಸಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
ಸ್ವಾಮೀಜಿ ಫುಲ್ ಖುಷ್…
ನಮ್ಮ ಈ ಹೋರಾಟಕ್ಕೆ ಸಮಾಜದ ಜನರು ಬಹಳಷ್ಟು ಸ್ಪಂದಿಸುತ್ತಿದ್ದಾರೆ. ನನ್ನ ಜನರ ಸಾಮಾಜಿಕ ಕಳಕಳಿ ನನಗೆ ಬಹಳಷ್ಟು ಖುಷಿ ತಂದಿದೆ. ಜೊತೆಗೆ ಉತ್ತರ ಕರ್ನಾಟಕ ಭಾಗದ ಅನೇಕ ಸ್ವಾಮೀಜಿಗಳು ನನಗೆ ಕೈಜೋಡಿಸಿದ್ದಾರೆ. ಇದು ನನಗೆ ಹೆಚ್ಚು ಶಕ್ತಿ ನೀಡಿದೆ ಎಂದು ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳು ತಮಗಾದ ಆನಂದವನ್ನು ಮಾಧ್ಯಮದೆದುರು ಹಂಚಿಕೊಂಡರು.
ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ರೇವಣಸಿದ್ದ ಶಾಂತಮುನಿ ಸ್ವಾಮೀಜಿ, ತಿಂತಿಣಿ ಶ್ರೀ ಸಿದ್ದರಾಮಾನಂದ ಸ್ವಾಮೀಜಿ, ಮಹದೇವಯ್ಯ ಒಡೆಯರ, ಶಾಸಕ ಅರುಣಕುಮಾರ ಪೂಜಾರ್, ಕಾಂಗ್ರೆಸ್ ಮುಖಂಡ ಪ್ರಕಾಶ್ ಕೋಳಿವಾಡ, ನಗರಸಭೆ ಸದಸ್ಯರು ಮಾರುತಿ ಹರಿಹರ ಮತ್ತಿತರರು ಪಾಲ್ಗೊಂಡಿದ್ದರು.
ಬೃಹತ್ ಮೆರವಣಿಗೆ : ಹಳೆಯ ಹೆದ್ದಾರಿಯ ಪಶ್ವಿಮ ಬಡಾವಣೆಯ ಶ್ರೀ ಛತ್ರದ ದುರ್ಗಮ್ಮ ಗುಡಿಯಿಂದ ಕನಕ ಮೂರ್ತಿಯ ರಥಯಾತ್ರೆ, ಜೊತೆಗೆ ಕಾಯಕೋಲು ಹಿಡಿದ ನೂರಾರು ಭಕ್ತರ ಮಧ್ಯದಲ್ಲಿ ಶ್ರೀಗಳ ಪಾದಯಾತ್ರೆ ನಡೆಯಿತು.
ಜೋಡೆತ್ತು, ಒಂಟೆತ್ತುಗಳ ಲಾರಿಗಳು, ನೂರಾರು ಅಲಂಕರಿಸಿದ ಎತ್ತುಗಳು, ನೂರಾರು ಕುರಿಗಳು, ಟ್ರ್ಯಾಕ್ಟರ್‌ಗಳು ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದ ಮೈಲುದ್ದದ ಮೆರವಣಿಗೆಯು ಒಳಬೀರಪ್ಪನ ಗುಡಿಮುಂದೆ ಹಾಯ್ದು ಸಭಾ ಸ್ಥಳ ಹೊರಬೀರಪ್ಪನ ಗುಡಿಗೆ ಬಂದಿತು.