ಎಳ್ಳು-ಬೆಲ್ಲ, ಕಬ್ಬು, ಸಕ್ಕರೆ ಗೊಂಬೆ ಖರೀದಿ
ದಾವಣಗೆರೆ, ಜ.13- ಹೊಸ ಭರವಸೆಯ ಬೆಳಕಿನೊಂದಿಗೆ ಹೊಸ ವರ್ಷ ಸ್ವಾಗತಿಸಿದ ಜನತೆ ನಾಳೆ ಇದೀಗ ಗುರುವಾರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲು ಸಿದ್ಧರಾಗುತ್ತಿದ್ದಾರೆ.
ಬುಧವಾರವೇ ಜನತೆ ನಗರದ ಮಾರುಕಟ್ಟೆಯಲ್ಲಿ ಎಳ್ಳು, ಬೆಲ್ಲ, ಹುರಿಗಡಲೆ, ಕಡಲೆ ಕಾಯಿ, ಕಬ್ಬಿನ ತುಂಡುಗಳು, ಹಣ್ಣುಗಳನ್ನು ಖರೀದಿಸುತ್ತಿದ್ದರು. ಮಂಡಿಪೇಟೆ, ಗಡಿಯಾರ ಕಂಬ, ಕೆ.ಆರ್. ಮಾರುಕಟ್ಟೆ ಬಳಿ ಸಕ್ಕರೆಗೊಂಬೆ, ಎಳ್ಳು-ಬೆಲ್ಲದ ಖರೀದಿ ನಡೆಯಿತು.
ಸೂರ್ಯ ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನಲಾಗುತ್ತದೆ.
ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುವ ಸೂರ್ಯ, ತನ್ನ ಪಥವನ್ನು ಉತ್ತರಾಭಿಮುಖ ವಾಗಿ ಬದಲಿಸುತ್ತಾನೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.
ಪ್ರಾಚೀನ ಕಾಲದಿಂದಲೂ ಆಚರಣೆಯಂತೆ ನಾಳೆ ಜನತೆ ಮನೆಯಲ್ಲಿ ಎಳ್ಳು-ಬೆಲ್ಲವನ್ನು ತಯಾರಿಸಿ, ಸಂಬಂಧಿಗಳು, ಸ್ನೇಹಿತರಿಗೆ ಹಂಚುತ್ತಾರೆ. ಚಳಿಗಾಲದಲ್ಲಿ ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಚರ್ಮದ ಕಾಂತಿಯೂ ಹೆಚ್ಚುತ್ತದೆ ಎಂಬ ವೈಜ್ಞಾನಿಕ ಕಾರಣವೂ ಇದೆ. ಉದ್ಯಾನವನಗಳತ್ತ ಜನತೆ: ಕೊರೊನಾದಿಂದಾಗಿ ಕಳೆದ ವರ್ಷ ವಾಯುವಿಹಾರಿಗಳನ್ನು ಜತೆ ಉದ್ಯಾನವನಗಳತ್ತ ಸುಳಿದಿರಲಿಲ್ಲ.
ಆದರೆ ಇದೀಗ ಕೊರೊನಾ ಹಾವಳಿ ಇಳಿಕೆಯಾಗಿದ್ದು, ನಾಳೆ ಸಂಕ್ರಾಂತಿ ದಿನದಂದು ಮತ್ತೆ ಉದ್ಯಾನವನಗಳು ತುಂಬಿಕೊಳ್ಳುವ ಸಾಧ್ಯತೆ ಇದೆ. ಮಕ್ಕಳು, ಮಹಿಳೆಯರು, ಪುರುಷರು ಕುಟುಂಬ ಸಹಿತ ಪಾರ್ಕುಗಳಿಗೆ ಆಗಮಿಸಿ, ಮನೆಯಿಂದ ತಂದ ಊಟವನ್ನು ಸವಿದು ತೆರಳುವುದು ನಗರದ ಜನತೆಗೆ ಸಂಕ್ರಾಂತಿ ವಿಶೇಷವಾಗಿದೆ.