ಸಂಸತ್ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ, ಮಾ. 21 – ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್‌ನಡಿಯಲ್ಲಿ ಶೇ. 80 ರಷ್ಟು ಮನೆಗಳಿಗೆ ನಳದ ಮೂಲಕ ನೀರಿನ ಸಂಪರ್ಕವಿದೆ ಎಂದು ಹೇಳುತ್ತದೆ. ಆದರೆ ಇದರಲ್ಲಿ ಕೇವಲ ಶೇ. 62 ರಷ್ಟು ನಳ ಸಂಪರ್ಕಗಳು ಮಾತ್ರ ಸಂಪೂರ್ಣ ಕಾರ್ಯ ನಿರ್ವಹಿಸುತ್ತಿದ್ದು, ದಿನಕ್ಕೆ 55 ಲೀಟರ್ ನೀರಿನ ಗುರಿಯನ್ನು ಪೂರೈಸುತ್ತಿವೆ. ಈ ನಡುವೆಯೇ 2024-25ರಲ್ಲಿ ಜಲ ಜೀವನ್ ಮಿಷನ್‌ಗೆ 67.7 ರಷ್ಟು ಬಜೆಟ್ ಕಡಿತವಾಯಿತು. ಇದು ನಿಧಿಗಳ ಅಳವಡಿಕೆಯಲ್ಲಿ ವೈಫಲ್ಯವನ್ನು ತೋರುತ್ತಿದೆ ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಸದನದ ಗಮನ ಸೆಳೆದರು.
ಸಂಸತ್ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ಜಲ ಜೀವನ ಮಿಷನ್ ಬಗ್ಗೆ ಜಲ ಶಕ್ತಿ ಸಚಿವಾಲಯ ನೀಡಿರುವ ಅನುದಾನದ ಕುರಿತು ಅವರು ಮಾತನಾಡಿದರು.
ಅಟಲ್ ಭೂಜಲ್ ಯೋಜನೆಯಡಿಯಲ್ಲಿ, 8000 ಜಲಹೀನ ಪಂಚಾಯತ್‌ಗಳಲ್ಲಿ ನೀರಿನ ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ವಾಸ್ತವವಾಗಿ ಕೇವಲ ಶೇ. 37 ರಷ್ಟು ಜಲ ಹೀನ ಪ್ರದೇಶಗಳನ್ನು ಮಾತ್ರ ತಲುಪಲಾಗಿದೆ. ಈ ಯೋಜನೆಯಡಿ ಬಜೆಟ್‌ನ ಕೇವಲ ಶೇ. 57 ರಷ್ಟು ಮಾತ್ರ ಬಳಸಿದೆ. ಜಲ ಶಕ್ತಿ ನಿಧಿಗಳಿದ್ದರೂ ಅವು ಬಳಸಲಾಗುತ್ತಿಲ್ಲ ಎಂದು ವಿವರಿಸಿದರು.
ದಾವಣಗೆರೆಯ ಭದ್ರಾ ಕಾಲುವೆಯ ಟೇಪ್ರೊ-ಎಂಡ್ ಗ್ರಾಮೀಣ ಪ್ರದೇಶಗಳಾದ ಹರಿಹರ, ಮಲೆಬೆನ್ನೂರು, ದಾವಣಗೆರೆ, ಹರಪನಹಳ್ಳಿ ಸೇರಿದಂತೆ ಸುಮಾರು 5,700 ಹೆಕ್ಟೇರ್ ಕೃಷಿ ಭೂಮಿಯನ್ನು ಹೊಂದಿದ್ದು, ನೂರಾರು ಗ್ರಾಮೀಣ ಪ್ರದೇಶಗಳಿಗೆ ನೀರು ಒದಗಿಸುತ್ತಿದೆ. ಈ ಕಾಲುವೆ ಗಳಲ್ಲಿ ಭಾರಿ ಹೂಳು ಶೇಖರಣೆಯಾಗಿರುವುದರಿಂದ ರೈತರು ವಾರ್ಷಿಕ ಒಂದೇ ಬೆಳೆಯುತ್ತಿದ್ದು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಭದ್ರಾ ಕಾಲುವೆಯ ಹೂಳೆತ್ತಲು ಮತ್ತು ನೀರಿನ ಹರಿವನ್ನು ಸುಗಮ ಗೊಳಿಸಲು ಮತ್ತು ಆಧುನೀಕರಣಗೊಳಿಸಲು ಅಂದಾಜು ರೂ. 150 ಕೋಟಿಯ ವಿಶೇಷ ಅನುದಾನವನ್ನು ಕಾಲುವೆಗಳ ಕೊನೆ ಭಾಗದ ರೈತರ ಅನುಕೂಲಕ್ಕಾಗಿ ಬಿಡುಗಡೆ ಮಾಡಬೇಕು.
ಕೇಂದ್ರ ಸರ್ಕಾರ ತನ್ನದೇ ಆದ ಬಜೆಟ್‌ನಲ್ಲಿ ಘೋಷಿಸಿದ ಜಲ ಶಕ್ತಿ ನಿಧಿಗಳನ್ನು ಬಿಡುಗಡೆ ಮಾಡಲು ವಿಫಲವಾಗಿದೆ. ಕರ್ನಾಟಕವು ಕೇಂದ್ರ ಸರ್ಕಾರದ ಖಜಾನೆಗೆ ಕೊಡುಗೆಯಾಗಿ ಪ್ರತಿ 100 ರೂ. ಗಳಿಗೆ ಕೇವಲ 13 ರೂ ಮಾತ್ರ ಮರಳಿ ಪಡೆಯುತ್ತಿದೆ. ಕರ್ನಾಟಕ ಜಲ ಜೀವನ್ ಮಿಷನ್‌ನಲ್ಲಿ 34 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ 22ನೇ ಸ್ಥಾನದಲ್ಲಿದೆ. ಇದು ಆಡಳಿತ ವೈಫಲ್ಯದಿಂದ ಮಾತ್ರವಲ್ಲ, ಕೇಂದ್ರವು ರೂ. 26,119 ಕೋಟಿ ಘೋಷಿಸಿದಾಗಲೂ ಕೇವಲ ರೂ. 11,760 ಕೋಟಿ ಬಿಡುಗಡೆ ಮಾಡಿದೆ ಅದರಲ್ಲಿಯೂ ಕೇವಲ ಶೇ. 45 ರಷ್ಟು ಮಾತ್ರ ಇದು ಮಲತಾಯಿ ಧೋರಣೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ ?
2024-25ರಲ್ಲಿ ಕರ್ನಾಟಕಕ್ಕೆ ರೂ. 3,804 ಕೋಟಿ ಮೀಸಲಾಗಿದ್ದರೂ, ಕೇವಲ ರೂ. 570 ಕೋಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಸರ್ಕಾರ ತನ್ನ ಬಜೆಟ್‌ನಿಂದ ರೂ. 4,977 ಕೋಟಿ ಖರ್ಚು ಮಾಡಿದೆ, ಇದು ಕೇಂದ್ರ-ರಾಜ್ಯ 60:40 ಅನುಪಾತಕ್ಕೂ ಹೆಚ್ಚು.
ಅನೇಕ ಪತ್ರಗಳು, ಮನವಿಗಳು, ಪ್ರತಿಭಟನೆಗಳ ಬಳಿಕವೂ ಕೇಂದ್ರ ಸರ್ಕಾರ ಹೆಚ್ಚು ನಿಧಿ ಬಿಡುಗಡೆ ಮಾಡಿಲ್ಲ ಆದರೆ ಕರ್ನಾಟಕ ನಿಷ್ಠೆಯಿಂದ ತನ್ನ ತೆರಿಗೆ ಪಾಲು ನೀಡುತ್ತಿದೆ ಎಂದರು.
ಈ ಯೋಜನೆ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಗಳಲ್ಲಿನ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಮತ್ತು 367 ಸಣ್ಣ ನೀರಾವರಿ ಟ್ಯಾಂಕ್‌ಗಳನ್ನು ತುಂಬಿಸಲು ಈ ಯೋಜನೆ ಅತ್ಯಗತ್ಯ. ಕೇಂದ್ರವು ರೂ. 5,300 ಕೋಟಿ ಘೋಷಿಸಿದರೂ ಕರ್ನಾಟಕದವರಾದ ನಾವು ಖಾಲಿ ಚೆಂಬು ಮಾತ್ರ ಪಡೆದಿದ್ದೇವೆ. ಕರ್ನಾಟಕ ತನ್ನ ಪಾಲಿನ ರೂ. 10,121.75 ಕೋಟಿಯನ್ನು ಯೋಜನೆಗೆ ನೀಡಿದೆ ಎಂದರು. ಕೇಂದ್ರ ಸರ್ಕಾರ ಮೊದಲನೆಯದಾಗಿ, ಕರ್ನಾಟಕದ ಬಾಕಿ ಉಳಿದಿರುವ ನಿಧಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಕರ್ನಾಟಕ ನೀಡುವ ಪ್ರತಿ ರೂಪಾಯಿಗೂ ಎರಡು ಪಟ್ಟು ಮರಳಿ ನೀಡಬೇಕು. ಎರಡನೆಯದಾಗಿ ಬಜೆಟ್ ನಿಯೋಜನೆಗಳನ್ನು ಗುರಿಗಳಿಗೆ ಅನುಗುಣವಾಗಿ ಹೆಚ್ಚಿಸಬೇಕು. ನೀರಿನ ಭದ್ರತೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಬಜೆಟ್‌ನಲ್ಲಿ ಘೋಷಿಸಿದ ನಿಧಿಗಳನ್ನು ಕನಿಷ್ಠವಾದರೂ ಬಳಕೆ ಮಾಡಬೇಕು ಎಂದರು.