ದಾವಣಗೆರೆ, ಮಾ.21- ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಉನ್ನತ ಸ್ಥಾನ ಹೊಂದುತ್ತಿದ್ದರೂ ಲಿಂಗ ಅಸಮಾನತೆ ಇಂದಿಗೂ ಜೀವಂತವಾಗಿದೆ, ಇದು ತೊಲಗಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೊನ್ನೆ ನಡೆದ `ಅಂತರರಾಷ್ಟ್ರೀಯ ಮಹಿಳಾ ದಿನ’ದ ನಿಮಿತ್ತ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾನೂನು ಕುರಿತು `ಒಂದು ದಿನದ ಅರಿವು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಹಿಂದೆ ಮಹಿಳೆಯನ್ನು ಮಕ್ಕಳು ಹೆರುವ ಯಂತ್ರದಂತೆ ಮತ್ತು ಅವಳನ್ನು ಆಳಿನಂತೆ ಕೀಳಾಗಿ ಕಾಣಲಾಗುತ್ತಿತ್ತು. ಆದರೆ ಈಚಿನ ದಿನಗಳು ಸ್ವಲ್ಪ ಬದಲಾಗಿವೆ. ಸಂವಿಧಾನದ ಮೂಲಕ ಸಮಾನ ಅವಕಾಶ ಸಿಕ್ಕಿದ್ದರಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸ್ತ್ರೀ ಗುರುತಿಸಿಕೊಳ್ಳುತ್ತಿದ್ದಾಳೆ ಎಂದರು.
ಸಮಾಜದ ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಲ್ಲಿ ಮಹಿಳೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ತನಗೆ ಲಭಿಸಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೆಣ್ಣು ಅಬಲೆಯಲ್ಲ. ಸಬಲೆ ಎಂದು ಸಾಬೀತು ಪಡಿಸುತ್ತಿದ್ದಾಳೆ ಎಂದು ಹೇಳಿದರು.
ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ವಿಶೇಷವಾದ ಸ್ಥಾನಮಾನ ಪಡೆದಿದ್ದಾಳೆ. ಸಾಧನೆಗೆ ಎದುರಾಗುವ ದ್ವಂಧ್ವಗಳನ್ನು ಬದಿಗೊತ್ತಿ ಕೇವಲ ಗುರಿಯೆಡೆಗೆ ಗಮನ ಹರಿಸಬೇಕು ಎಂದರು.
ಪುರುಷ ಪ್ರಧಾನ ರಾಷ್ಟ್ರದಲ್ಲಿ ಸ್ತ್ರೀ ಸಮಾನತೆ ಕಿತ್ತುಕೊಂಡು ಅವರನ್ನು ಹತ್ತಿಕ್ಕಲು ಆರಂಭಿಸಿದಾಗ 12ನೇ ಶತಮಾನದ ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣರು ಕ್ರಾಂತಿಕಾರಿ ಕಹಳೆ ಊದಿ ಮಹಿಳೆಯರ ಸಮಾನತೆಗೆ ಶ್ರಮಿಸಿದರು ಎಂದು ಹೇಳಿದರು.
ಇದೇ ವೇಳೆ ಚಿಕ್ಕಮಗಳೂರಿಗೆ ವರ್ಗಾವಣೆಗೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯ ತಡಸ ಪೊಲೀಸ್ ಠಾಣೆಯ ಆರ್. ಮಲ್ಲೇಶ್, ನ್ಯಾಯಾಧೀಶರಾದ ಟಿ.ಎಂ. ನಿವೇದಿತಾ, ಮಹಾವೀರ ಮ. ಕರೆಣ್ಣವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಎಂ. ಸಂತೋಷ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕವಿತಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೆ.ಬಿ. ಕೊಟ್ರೇಶ್ ಇದ್ದರು.