ಭೈರನಪಾದ ಏತ ನೀರಾವರಿ ಜಾರಿಗೊಳಿಸಿ, ಅಕ್ರಮ ಪಂಪ್‌ಸೆಟ್‌ ತೆರವುಗೊಳಿಸಿ

ಭೈರನಪಾದ ಏತ ನೀರಾವರಿ ಜಾರಿಗೊಳಿಸಿ, ಅಕ್ರಮ ಪಂಪ್‌ಸೆಟ್‌ ತೆರವುಗೊಳಿಸಿ

ಅಧಿವೇಶನದಲ್ಲಿ ಸರ್ಕಾರಕ್ಕೆ ಶಾಸಕ ಹರೀಶ್ ಆಗ್ರಹ

ಶಿವಮೊಗ್ಗ ರಸ್ತೆ ಅಭಿವೃದ್ಧಿ, ಹರಿಹರದಲ್ಲಿ ಕೈಗಾರಿಕೆ ಸ್ಥಾಪನೆಗೆ  ಮನವಿ

ಬೆಂಗಳೂರು, ಮಾ.21- ಭದ್ರಾ ಅಚ್ಚುಕಟ್ಟಿನ ಕೊನೆ ಭಾಗ ವಾಗಿರುವ ಹರಿಹರ ತಾಲ್ಲೂಕಿನ ರೈತರಿಗೆ ಭದ್ರಾ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಭೈರನಪಾದ ಏತ ನೀರಾವರಿ ಯೋಜನೆಯನ್ನು ಕೂಡಲೇ ಜಾರಿಗೊಳಿಸುವಂತೆ ಶಾಸಕ ಬಿ.ಪಿ.ಹರೀಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ವಿಧಾನಸಭೆಯ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಹರೀಶ್ ಅವರು, ಹರಿಹರ ತಾಲ್ಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಯಿಂದ ಬೇರೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಯೋಜನೆಗಳನ್ನು ಮಾಡಿರುವ ಸರ್ಕಾರಗಳು, ನಮ್ಮ ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡುತ್ತಲೇ ಬಂದಿವೆ.

ಏತ ನೀರಾವರಿ ಯೋಜನೆ ಜಾರಿಗೊಳಿಸಿ, ಇಲ್ಲದಿದ್ದರೆ ಭದ್ರಾ ನಾಲೆಗೆ ಅಕ್ರಮವಾಗಿ ಅಳವಡಿಸಿರುವ ಸಾವಿರಾರು ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ ಎಂದು ಸರ್ಕಾರಕ್ಕೆ ಆಗ್ರಹ ಪಡಿಸಿದ ಹರೀಶ್ ಅವರು, ಈ ಎರಡರಲ್ಲಿ ಒಂದೂ ಬೇಡಿಕೆಯನ್ನು ಈಡೇರಿಸದಿದ್ದರೆ, ತುಂಗಭದ್ರಾ ನದಿಯಿಂದ ಬೇರೆಡೆಗೆ ತೆಗೆದುಕೊಂಡು ಹೋಗುವ ನದಿ ನೀರನ್ನು ನಿಲ್ಲಿಸಲು ನಮ್ಮ ತಾಲ್ಲೂಕಿನ ರೈತರು ಈಗಾಗಲೇ ನಡೆಸಿದ ಸಭೆಯಲ್ಲಿ ತೀರ್ಮಾನಿಸಿದ್ದಾರೆ ಎಂಬ ವಿಷಯವನ್ನು ಸರ್ಕಾರದ ಗಮನಕ್ಕೆ ತಂದರು.

ರಸ್ತೆ ಅಭಿವೃದ್ಧಿಗೆ ಮನವಿ : ಕಳೆದ ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದೇ ನೆನೆಗುದಿಗೆ ಬಿದ್ದಿರುವ ಮರಿಯಮ್ಮನಹಳ್ಳಿ – ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸುವಂತೆ ಸರ್ಕಾರದ ಗಮನ ಸೆಳೆದ ಹರೀಶ್ ಅವರು, ರಸ್ತೆ ಅಗಲೀಕರಣವಾಗದ ಕಾರಣ, ರಸ್ತೆ ಅಪಘಾತಗಳು ಹೆಚ್ಚಾಗಿ ಅನೇಕ ಸಾವು-ನೋವುಗಳು ಆಗಿರುವುದನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದರು.

ಕೈಗಾರಿಕೆಗಳನ್ನು ಸ್ಥಾಪಿಸಿ : ಹರಹರ ಮತ್ತು ದಾವಣಗೆರೆ ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳೆಂದು ಘೋಷಿಸಿ, ನಂತರ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಮುಂದಾಗುವ ಮೂಲಕ ಎರಡೂ ತಾಲ್ಲೂಕುಗಳ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ಹರೀಶ್ ಸರ್ಕಾರಕ್ಕೆ ಮನವಿ ಮಾಡಿದರು. 

ಮೆಡಿಕಲ್ ಕಾಲೇಜು ಆರಂಭಿಸಿ : ದಾವಣಗೆರೆ ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಅಲ್ಲಿ 2 ಖಾಸಗಿ ಮೆಡಿಕಲ್ ಕಾಲೇಜುಗಳು ಇರುವುದರಿಂದ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಹರೀಶ್ ಸರ್ಕಾರಕ್ಕೆ ಆಗ್ರಹಿಸಿದರು.

error: Content is protected !!