ಹರಿಹರ, ಮಾ.20- ನಗರದ ಕ್ರೀಡಾಂಗಣ ಇಲಾಖೆಯ ಅಡಿಯಲ್ಲಿ ಬರುವ 22 ಮಳಿಗೆಗಳ ಹರಾಜ್ ಪ್ರಕ್ರಿಯೆಯನ್ನು, ದಿಢೀರ್ ಮುಂದಕ್ಕೆ ಹಾಕಿರುವ ಕ್ರಮವನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಮುಖಂಡರು ಕ್ರೀಡಾ ಇಲಾಖೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
ಈ ವೇಳೆ ಜಯ ಕರ್ನಾಟಕ ಸಂಘಟನೆ ಮುಖಂಡ ಎ. ಗೋವಿಂದ ಮಾತನಾಡಿ, ಮಳಿಗೆಗಳ ಮರು ಹರಾಜು ಮಾಡುವಂತೆ ಆಗ್ರಹಿಸಿ ಗಾಂಧಿ ವೃತ್ತದಲ್ಲಿ ನಿರಂತರ ಧರಣಿ ನಡೆಸುತ್ತಿದ್ದು, ಇದರ ಪರಿಣಾಮವಾಗಿ ಕ್ರೀಡಾ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಮಾರು 22 ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸುವುದಕ್ಕೆ ತೀರ್ಮಾನ ಮಾಡಿದ್ದರಿಂದ, ಸಾರ್ವಜನಿಕರು ಸುಮಾರು 121 ಅರ್ಜಿಯನ್ನು ಪಡೆದುಕೊಂಡಿದ್ದರು. ಅದರಲ್ಲಿ ಕೆಲವರು ಅನ್ಯ ಕಾರಣದಿಂದಾಗಿ, ಮುಂಗಡ ಹಣ ಕಟ್ಟಿದ್ದ ಡಿ.ಡಿ ವಾಪಸ್ ಪಡೆದಿದ್ದರಿಂದ 74 ಜನರಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿ ಇಂದು ಹರಾಜು ಪ್ರಕ್ರಿಯೆಗೆ ಮುಂದಾಗಿದ್ದರು. ಆದರೆ, ಕ್ರೀಡಾ ಇಲಾಖೆಯ ಅಧಿಕಾರಿಗಳು ಇವತ್ತಿನ ಹರಾಜು ಪ್ರಕ್ರಿಯೆಯನ್ನು ಊರಮ್ಮ ದೇವಿ ಹಬ್ಬ ಮತ್ತು ರಂಜಾನ್ ಹಬ್ಬದ ಅಂಗವಾಗಿ ಏಪ್ರಿಲ್ 1 ಕ್ಕೆ ಮುಂದೂಡಲಾಗಿದೆ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಇದರಲ್ಲಿ ಏನು ಗೋಲ್ ಮಾಲ್ ನಡೆಯುತ್ತಿದೆ ಎಂದು ಅನುಮಾನ ವ್ಯಕ್ತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ರೀಡಾ ಇಲಾಖೆಯ ಅಧಿಕಾರಿ ಶ್ರೀಶೈಲಾ ಮಾತನಾಡಿ, ಜಿಲ್ಲಾಧಿಕಾರಿಗಳು ಏಪ್ರಿಲ್ ಒಂದರಂದು ಹರಾಜು ಪ್ರಕ್ರಿಯೆ ನಡೆಸುವಂತೆ ಆದೇಶವನ್ನು ನೀಡಿದ ಪರಿಣಾಮವಾಗಿ ಇಂದು ನಡೆಯಬೇಕಿದ್ದ, ಸಾಮಾನ್ಯ ವರ್ಗದವರ 50, ಎಸ್ಸಿ 10, ಎಸ್ಪಿ 8, ಅಂಗವಿಕಲರಿಗೆ 6 ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಯಿತು ಎಂದು ಹೇಳಿದರು.
ಇದೇ ವೇಳೆ ಬಹುಜನ ಪಕ್ಷದ ಹನುಮಂತಪ್ಪ ಪೊಲೀಸ್ ಅಧಿಕಾರಿಗಳಿಗೆ ದೂರನ್ನು ನೀಡಿದರು.
ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ಅಧಿಕಾರಿ ಅರ್ಪಿತಾ, ಡಿಎಸ್ಎಸ್ ಸಂಘಟನೆ ಮುಖಂಡರಾದ ಮೈಲಪ್ಪ ಮಂಜುನಾಥ್ ಕೊಪ್ಪಳ, , ಜಯ ಕರ್ನಾಟಕ ಸಂಘಟನೆ ಮುಖಂಡ ಆನಂದ್ ಇತರರು ಹಾಜರಿದ್ದರು.