ಆರುಂಡಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ
ಹೊನ್ನಾಳಿ, ಮಾ. 20 – ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಆರುಂಡಿ ಗ್ರಾಮದಲ್ಲಿ ಕಲ್ಲು ಕ್ವಾರಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪವಿಭಾಗಾಧಿಕಾರಿ ಅಭಿಷೇಕ್, ರಶ್ಮಿ ಸೇರಿದಂತೆ, ವಿವಿಧ ಇಲಾಖೆಯ ಅಧಿಕಾರಿಗಳು ನಿನ್ನೆ ಭೇಟಿ ನೀಡಿದ್ದರು.
ಸ್ಥಳಕ್ಕೆ ಭೇಟಿ ಮಾಡಿ ಜನರ ಸಂಕಷ್ಟ ಆಲಿಸಿ ಪರಿಶೀಲನೆ ನಡೆಸಿದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಅವರು, ಕೂಡಲೇ ಅಕ್ರಮ ಗಣಿಗಾರಿಕೆ, ಕಾನೂನು ಬಾಹಿರ ಕ್ರಷರ್ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಅವರು, ಊರಿನ ಸಮಸ್ಯೆಯನ್ನು ಅಧಿಕಾರಿಗಳು ಹತ್ತಿರದಿಂದ ಗಮನಿಸಿದ್ದಾರೆ. ಜನರ ಸಮಸ್ಯೆಗಳು ಅನುಭವಕ್ಕೆ ಬರುತ್ತಿವೆ. ನಾನು ಹಲವು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಆದ್ರೆ, ಇಲ್ಲಿ ಬರುತ್ತಿರುವ ಧೂಳು ಹೆಚ್ಚಾಗಿದೆ. ಮಕ್ಕಳು ಈ ವಾತಾವರಣದಲ್ಲಿ ಪಾಠ ಕಲಿಯಲು ಆಗದು. ಯಾವುದೇ ರಸ್ತೆಯಾದರೂ ಅಲ್ಲಿಂದ ನೂರು ಮೀಟರ್ ಆಚೆ ಇರಬೇಕು. ಈ ಬಗ್ಗೆ ಪರಿಶೀಲಿಸಬೇಕು. ಜನರು ತೊಂದರೆಗಳ ಬಗ್ಗೆ ಹೇಳಿದಾಗ ಸೇಫ್ ಜೋನ್ 500 ಮೀಟರ್ ದೂರದವರೆಗೆ ಇರಬೇಕು. ಇದೆಲ್ಲಾ ಕಾನೂನು ಬದ್ದವಾಗಿ ನೀಡಬೇಕು. 2011ರಲ್ಲಿ ಕ್ರಷರ್ ಆಕ್ಟ್ ಅಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲೇಬೇಕಾಗುತ್ತದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಂಚಿಕೊಪ್ಪ ಗ್ರಾಮ ಪಂಚಾಯಿಯ ಆರುಂಡಿ ಗ್ರಾಮದ ವ್ಯಾಪ್ತಿಯಲ್ಲಿನ ಕಲ್ಲಿನ ಕ್ವಾರಿ ಕ್ರಷರ್ ಹಾಗೂ ಗಣಿಗಾರಿಕೆ ಕಾನೂನು ಬಾಹಿರವಾಗಿ ನಡೆಯುತ್ತಿದ್ದು, ಗ್ರಾಮದ ರಸ್ತೆ ಹಾಳಾಗಿದೆ. ಧೂಳಿನಿಂದ ಗ್ರಾಮಸ್ಥರಿಗೆ ಅನಾನುಕೂಲವಾಗಿದೆ. ರೈತರು ಬೆಳೆದ ಬೆಳೆಗಳು ಹಾಳಾಗಿವೆ. ನೀರು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಅಂತರ್ಜಲ ಮಟ್ಟವೂ ಕುಸಿದಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಗ್ರಾಮದ ದೇವಸ್ಥಾನಗಳು ಹಾಗೂ ಆರುಂಡಿ ಗ್ರಾಮದ ವಾಸದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆಗಳಲ್ಲಿ ವಾಸ ಮಾಡುವುದೇ ಕಷ್ಟದಂತಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ನಡೆಸುತ್ತಿರುವ ಪ್ರತಿಯೊಂದು ಕ್ವಾರಿಗಳಲ್ಲಿ ಯಾವುದೇ ತಡೆಗೋಡೆ ಇಲ್ಲ. ಮರಗಿಡಗಳನ್ನು ಬೆಳೆಸಿಲ್ಲ. ತಂತಿ ಬೇಲಿ ಹಾಕುವುದೂ ಸೇರಿದಂತೆ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಊರಿಗೆ ಹತ್ತಿರವಾಗಿ ಕ್ರಷರ್, ಗಣಿಗಾರಿಕೆ ನಡೆಯುತ್ತಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಆರುಂಡಿ ಗ್ರಾಮದ ಶಾಲಾ ಮಕ್ಕಳಿಗೆ ಕಲ್ಲುಗಳನ್ನು ಪುಡಿ ಮಾಡಲು ಬಳಸುವ ಸ್ಫೋಟಕಗಳಿಂದ ಶ್ರವಣ ಶಕ್ತಿ ಕುಂದಿದ್ದು ಮತ್ತು ಧೂಳಿನಿಂದ ಉಸಿರಾಟದ ತೊಂದರೆಯೂ ಆಗುತ್ತಿದೆ. ಅನೇಕ ಕಾಯಿಲೆಗಳು, ಚರ್ಮರೋಗಗಳು ಬಾಧಿಸುತ್ತಿವೆ. ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ಎಂದು ವಿನಯ್ ಕುಮಾರ್ ಒತ್ತಾಯಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ವಿನಯ್ ಕುಮಾರ್ ಅವರು ಬಿರುಕುಬಿಟ್ಟ ಮನೆಗಳು, ಮಕ್ಕಳಿಗೆ ಆಗುತ್ತಿರುವ ತೊಂದರೆ, ಹಾಳಾಗಿರುವ ಬೆಳೆಗಳನ್ನು ವೀಕ್ಷಿಸಿದರು.