ಜಿ.ಬೇವಿನಹಳ್ಳಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಡಾ. ಶ್ರೀನಿವಾಸ್ ಸಲಹೆ
ಮಲೇಬೆನ್ನೂರು, ಮಾ.20- ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಖ್ಯವಾಗಿದ್ದು, ಇಲ್ಲಿ ನೀವು ಪರಿಶ್ರಮ ಹಾಕಿ, ಚೆನ್ನಾಗಿ ಓದಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ, ಮುಂದಿನ ಓದಿಗೆ ಅನುಕೂಲವಾಗಲಿದೆ ಎಂದು ಮಲೇಬೆನ್ನೂರಿನ ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಹುರಿದುಂಬಿಸಿದರು.
ಜಿ.ಬೇವಿನಹಳ್ಳಿ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 3 ತಿಂಗಳಿನಿಂದ ಉಚಿತವಾಗಿ ನಡೆಸಿದ ಟ್ಯೂಷನ್ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪರೀಕ್ಷೆ ಬಗ್ಗೆ ಒತ್ತಡ ಇಟ್ಟುಕೊಳ್ಳದೇ ಧೈರ್ಯದಿಂದ ಮತ್ತು ಲವವಿಕೆಯಿಂದ ಪರೀಕ್ಷೆ ಬರೆಯಿರಿ. ಪರೀಕ್ಷೆಯ ಫಲಿತಾಂಶ ಏನೇ ಬಂದರೂ ನೀವು ಮಾತ್ರ ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳದೇ, ಪುನಃ ಪ್ರಯತ್ನ ಪಟ್ಟು ಯಶಸ್ಸು ಸಾಧಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಂದೆ-ತಾಯಿಗಳಿಗೆ, ಗುರುಗಳಿಗೆ ಮತ್ತು ಶಾಲೆಗೆ ಕೀರ್ತಿ ತರುವ ನಿಟ್ಟಿನಲ್ಲಿ ನಿಮ್ಮ ಗಮನ ಇರಬೇಕು. ಮೊಬೈಲ್ ಮತ್ತು ದುಶ್ಚಟಗಳಿಂದ ದೂರವಿದ್ದು, ನಿಮ್ಮ ಬದುಕನ್ನು ಉಜ್ವಲಗೊಳಿಸಿಕೊಳ್ಳಿ ಎಂದು ಡಾ. ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಮಾತನಾಡಿ, ಮಲೇಬೆನ್ನೂರು ಯೋಜನಾ ವ್ಯಾಪ್ತಿಯ 9 ಪ್ರೌಢಶಾಲೆಗಳಲ್ಲಿ ಈ ಉಚಿತ ಟ್ಯೂಷನ್ ಕ್ಲಾಸ್‌ಗಳನ್ನು ಮಾಡಿಸಿದ್ದೇವೆ. ನಿಮ್ಮ ಫಲಿತಾಂಶ ನಮ್ಮ ಉತ್ಸಾಹವನ್ನು ಹೆಚ್ಚಿಸಲಿದೆ ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಜಿ.ಮಂಜುನಾಥ್ ಪಟೇಲ್ ಮಾತನಾಡಿ, ನೀವು ಒಂದು ಸ್ಥಾನಕ್ಕೆ ಹೋಗು ವವರಿಗೂ ಬೇರೆ ಕಡೆ ಗಮನ ಹರಿಸದೆ, ಓದು ಮತ್ತು ತಂದೆ-ತಾಯಿಗಳ ಶ್ರಮದ ಕಡೆಗೆ ನಿಮ್ಮ ಗಮನವಿಟ್ಟುಕೊಂಡರೆ, ನಿಮಗೆ ಯಶಸ್ಸು ಕಟ್ಟಿಟ್ಟಿ ಬುತ್ತಿ ಎಂದರು. ಜಿಲ್ಲಾ ಜನಜಾಗೃತಿ ವೇದಿಕೆಯ ಇನ್ನೋರ್ವ ಸದಸ್ಯ ಹಾಗೂ ಪತ್ರಕರ್ತ ಜಿಗಳಿ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಕಮಲಪ್ಪ ಕಲ್ಲೇರ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಮೊಬೈಲ್ ಮತ್ತು ನಿಮ್ಮಲ್ಲಿರುವ ನಿರಾಸಕ್ತಿ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ನೀವು ಓದಲೇಬೇಕು. ಇಲ್ಲದಿದ್ದರೆ ನೀವು ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ಜಿಗಳಿ ವಲಯ ಮೇಲ್ವಿಚಾರಕ ಹರೀಶ್, ಒಕ್ಕೂಟದ ಅಧ್ಯಕ್ಷ ಎ.ಕೆ.ಸೋಮಶೇಖರ್, ಶಿಕ್ಷಕರಾದ ಯಲ್ಲಪ್ಪ, ನಾಗರಾಜ್, ಶಿವನಗೌಡ, ಶ್ರೀಶೈಲ ರಜಪೂತ್, ಕಾಶೀನಾಥ್, ಚೈತ್ರ, ಸೇವಾ ಪ್ರತಿನಿಧಿಗಳಾದ ಉಷಾ, ಶೃತಿ ಈ ವೇಳೆ ಹಾಜರಿದ್ದರು.