ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವ ಧನ ಹೆಚ್ಚಳ, ನಿವೃತ್ತ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಸೌಲಭ್ಯ ಸೇರಿದಂತೆ, ಅವರ ಎಲ್ಲಾ ಬೇಡಿಕೆಗಳ ಕುರಿತು ಅಂಗನವಾಡಿ ಸಂಘಟನೆಗಳ ನಾಯಕರೊಂದಿಗೆ ನಾಳೆ ಸಭೆ ನಡೆಸಿ, ಚರ್ಚಿಸಿ, ತೀರ್ಮಾನಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತರಿಗೆ ಗ್ರಾಚ್ಯುಟಿ ಸೌಲಭ್ಯ ಸೇರಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಮಸ್ಯೆಗಳನ್ನು ಪರಿಹರಿಸಿ ಅವರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಜೆಟ್‍ನಲ್ಲಿ ಅಲ್ಪಪ್ರಮಾಣದ ಗೌರವ ಧನ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ, ಕನಿಷ್ಠ ವೇತನಕ್ಕೆ ಸಮಾನವಾಗಿ ಗೌರವ ಧನ ಹೆಚ್ಚಿಸಬೇಕು. ಗೌರವ ಧನ ಹೆಚ್ಚಳದ 6ನೇ ಗ್ಯಾರಂಟಿ ಜಾರಿಗೊಳಿಸಬೇಕು. 2011ರಿಂದ ನಿವೃತ್ತರಾದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಕಳೆದ ಚುನಾವಣಾ ಸಂದರ್ಭ ದಲ್ಲಿ ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರಿಗೆ ಕ್ರಮವಾಗಿ ಮಾಸಿಕ 15 ಸಾವಿರ ರೂ. ಮತ್ತು 10 ಸಾವಿರ ರೂ. ಗೌರವ ಧನ ಹೆಚ್ಚಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಬಜೆಟ್‍ನಲ್ಲಿ ಕೇವಲ ರೂ. 1000 ಮತ್ತು ರೂ. 750 ಅಷ್ಟೇ ಹೆಚ್ಚಿಸುವ ಮೂಲಕ ಕೊಟ್ಟ ಮಾತು ತಪ್ಪಲಾಗಿದೆ ಹಾಗೂ ಗ್ರಾಚ್ಯುಟಿ ಸೌಲಭ್ಯವನ್ನು 2011ರಿಂದ ನಿವೃತ್ತ ಎಲ್ಲರಿಗೂ ನೀಡುವ ಬದಲು 2023ರಿಂದ ಜಾರಿಗೆ ಬರುವಂತೆ ಪ್ರಾಯೋಗಿಕವಾಗಿ ಗ್ರಾಚ್ಯುಟಿ ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ, ನಿವೃತ್ತರೆಲ್ಲರಿಗೂ ಅನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು
ಇಂದು ನಡೆದ ಬೃಹತ್ ಧರಣಿಯ ನೇತೃತ್ವವನ್ನು ಎಐಟಿಯುಸಿ ಅಂಗನವಾಡಿ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಅಮ್ಜದ್, ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ, ಟಿಯುಸಿಸಿ ನೇತೃತ್ವದ ಅಂಗನವಾಡಿ ಸಂಘಟನೆಯ ರಾಜ್ಯಾಧ್ಯಕ್ಷ ಜಿ.ಆರ್.ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಬಿ. ನಾಗರತ್ನಮ್ಮ, ಎಐಯುಟಿಯುಸಿ ನೇತೃತ್ವದ ಅಂಗನವಾಡಿ ಸಂಘ ಟನೆಯ ರಾಜ್ಯಾಧ್ಯಕ್ಷ ಕೆ.ಸೋಮ ಶೇಖರ್ ಯಾದಗಿರಿ, ಪ್ರಧಾನ ಕಾರ್ಯದರ್ಶಿ ಎಂ. ಉಮಾದೇವಿ ಮತ್ತಿತರರು ವಹಿಸಿದ್ದರು.
ದಾವಣಗೆರೆ ಜಿಲ್ಲೆಯಿಂದ ಸುಮಾರು 500 ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿ, ಧರಣಿಗೆ ಶಕ್ತಿ ತುಂಬಿದರು.
ದಾವಣಗೆರೆಯಿಂದ ಆವರಗೆರೆ ಚಂದ್ರು, ಎಸ್.ಎಸ್.ಮಲ್ಲಮ್ಮ, ಹೆಚ್.ಜಿ.ಮಂಜುಳಾ, ಹೆಚ್.ಗೀತಾ, ಕೆ.ಸಿ.ನಿರ್ಮಲ, ಎಸ್.ಎಂ.ಸಾಕಮ್ಮ, ರೂಪವತಿ, ಕೆ.ಆರ್.ಮಮತಾ, ಸರೋಜ ಮತ್ತಿತರರು ಭಾಗವಹಿಸಿದ್ದರು.