ಹಳ್ಳಿ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಹೊರ ತನ್ನಿ

ಹಳ್ಳಿ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಹೊರ ತನ್ನಿ

ಜಿಗಳಿ : ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಗುರುಸಿದ್ಧಸ್ವಾಮಿ ಮನವಿ

ಮಲೇಬೆನ್ನೂರು, ಮಾ. 11- ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳೇ ತಯಾರು ಮಾಡಿದ ವಿಜ್ಞಾನ ವಸ್ತುಗಳ ಪ್ರದರ್ಶನ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ ಮಾತನಾಡಿ, ಈ ಶಾಲೆಯ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಇರುವ ಪ್ರತಿಭೆ ಕಂಡು ನನಗೆ ತುಂಬಾ ಸಂತೋಷವಾಯಿತು.

ಶಿಕ್ಷಣ ಕೃಷಿಯಲ್ಲಿ ನಿರತರಾಗಿರುವ ಶಿಕ್ಷಕರು, ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಹೊರ ತರುವ ಕೆಲಸ  ಮಾಡಬೇಕು. ಆಗ ಮಾತ್ರ ನೀವು ಶ್ರೇಷ್ಠ ಶಿಕ್ಷಕರಾಗಲು ಸಾಧ್ಯ ಎಂದು ಅವರು ಹೇಳಿದರು.

ಜಿಲ್ಲಾ ಬಾಲ ಭವನದ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಶಿಲ್ಪಾ ಮಾತನಾಡಿ, ಶಾಮನೂರು ಬಳಿ ಇರುವ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಜಿಲ್ಲಾ ಬಾಲ ಭವನವಿದ್ದು, ಶಿಕ್ಷಕರು ತಮ್ಮ ಶಾಲೆಗಳ ಮಕ್ಕಳನ್ನು  ಒಮ್ಮೆ ಅಲ್ಲಿಗೆ ಕರೆ ತಂದರೆ ಅಲ್ಲಿನ ಉದ್ದೇಶ ಮತ್ತು ಮನರಂಜನೆಯನ್ನು ಮಕ್ಕಳಿಗೆ ತಿಳಿಸುತ್ತೇವೆ.

ವಲಯ ಅರಣ್ಯಾಧಿಕಾರಿ ಧನ್ಯಕುಮಾರ್ ಮಾತನಾಡಿ, ಇಂತಹ ಒಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವ ಜಿಗಳಿ ಶಾಲೆಯ ಶಿಕ್ಷಕರು ಮಾದರಿಯಾಗಿದ್ದು, ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಇಕೋ ಕ್ಲಬ್ ಸ್ಥಾಪಿಸಿರುವುದು ಕೂಡಾ ಶ್ಲ್ಯಾಘನೀಯ ಎಂದರು.

ಅರಣ್ಯ ಇಲ್ಲದಿದ್ದರೆ, ನದಿಗಳೇ ಇರುವುದಿಲ್ಲ ಎಂಬ ವಿಷಯವನ್ನು ವಿವರವಾಗಿ ತಿಳಿಸಿದ ಧನ್ಯಕುಮಾರ್, ಮರ-ಗಿಡಗಳು ನೀರನ್ನು ಹಿಡಿದುಕೊಂಡು, ನಂತರ ಬಿಟ್ಟಾಗ ಅದು ಝರಿ ಝರಿಯಾಗಿ ಹರಿದು ಹಳ್ಳ-ಕೊಳ್ಳಗಳಾಗಿ ನದಿ ಸೇರುತ್ತದೆ.

ನದಿಗಳನ್ನು ಪೂಜಿಸುವ ನಾವೇ ನದಿಯಲ್ಲಿ ಬಟ್ಟೆ, ದೇವರ ಫೋಟೋಗಳನ್ನು ಸೇರಿದಂತೆ ಬೇಡವಾದ ವಸ್ತುಗಳನ್ನೂ ಹಾಕುತ್ತೇವೆ. ಇದರಿಂದ ನದಿ ನೀರು ಮಲೀನವಾಗುತ್ತದೆ. ಈ ಮಕ್ಕಳೇ ಪೋಷಕರಿಗೆ ಅರಿವು ಮೂಡಿಸಬೇಕು.

ವಾತಾವರಣವನ್ನು ಸುಸ್ಥಿರವಾಗಿಡಲು ಶೇ. 33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೀಗ ಶೇ. 22ರಷ್ಟು ಮಾತ್ರ ಅರಣ್ಯ ಪ್ರದೇಶ ಇದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸಲು ಒತ್ತು ನೀಡಬೇಕೆಂದು ಧನ್ಯಕುಮಾರ್ ಮನವಿ ಮಾಡಿದರು.

ಪತ್ರಕರ್ತ ಪ್ರಕಾಶ್, ಶಾಲಾ ಮುಖ್ಯ ಶಿಕ್ಷಕ ಲಿಂಗರಾಜ್, ಶಿಕ್ಷಕ ಲೋಕೇಶ್ ಮಾತನಾಡಿ, ವಿಜ್ಞಾನ ಎಂದರೆ ನಿರಂತರ ಬದಲಾವಣೆ ಆಗಿದ್ದು, ಚರ್ಚೆ, ತರ್ಕ, ಅನ್ವೇಷಣೆಗಳನ್ನು ಒಳಗೊಂಡಿದೆ. ಅಂತಹ ವಿಜ್ಞಾನ ವಸ್ತು ಪ್ರದರ್ಶನವನ್ನು ನಮ್ಮ ಶಾಲೆ ವಿದ್ಯಾರ್ಥಿಗಳು ಮಾಡಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರಾಚಾರಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಿ.ಆರ್. ಚಂದ್ರಪ್ಪ, ಬಿ. ಪ್ರಭಾಕರ್, ಶಾಲಾ ಶಿಕ್ಷಕರಾದ ಮಲ್ಲಿಕಾರ್ಜುನ್, ಶ್ರೀನಿವಾಸ್ ರೆಡ್ಡಿ, ಗುಡ್ಡಪ್ಪ, ಕರಿಬಸಮ್ಮ, ಜಯಶ್ರೀ, ಶಿಲ್ಪಾ, ಸಂಗೀತ ಈ ವೇಳೆ ಹಾಜರಿದ್ದರು.

error: Content is protected !!