ಮಾಯಕೊಂಡ, ಮಾ.11- ಹೋಬಳಿಯ ಓಬೇನಹಳ್ಳಿ, ಹೊನ್ನಾ ನಾಯ್ಕನಹಳ್ಳಿ, ನರಗನಹಳ್ಳಿ, ದಿಂಡದಹಳ್ಳಿ ಗ್ರಾಮದ ಐಪಿ ಸೆಟ್ಗಳಿಗೆ ನಿಗದಿತವಾಗಿ ವಿದ್ಯುತ್ ಪೂರೈಸುತ್ತಿಲ್ಲ, ಕೂಡಲೇ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿ ರೈತರು ಬೆಸ್ಕಾಂ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಲು ಮಾಯಕೊಂಡದ ಬೆಸ್ಕಾಂ ಕಚೇರಿಗೆ ದೌಡಾಯಿಸಿದರು.
ಬೆಸ್ಕಾಂ ಶಾಖಾಧಿಕಾರಿ, ಕೆಪಿಟಿಸಿಎಲ್ ಎಇಇ ಉಮೇಶ್, ಎಂಜಿನಿಯರ್ ನಾಗರಾಜ್ ಸೇರಿ ಯಾವ ಅಧಿಕಾರಿಗಳು ಸ್ಥಳದಲ್ಲಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ರೈತರು ಕೆಪಿಟಿಸಿಎಲ್ ಘಟಕಕ್ಕೆ ಬೀಗ ಜಡಿದು, ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದರು.
ರೈತ ಮುಖಂಡ ಗ್ರಾಮ ಪಂಚಾಯತಿ ಸದಸ್ಯ ಓಬೇನಹಳ್ಳಿ ಚಂದ್ರಶೇಖರ್ ಮಾತನಾಡಿ, ಹೊನ್ನಾನಾಯಕನಹಳ್ಳಿ, ಓಬಣ್ಣನಹಳ್ಳಿ, ಬಾವಿಹಾಳ್, ರೈತರ ಗೋಳು ಕೇಳುವವರಿಲ್ಲವಾಗಿದೆ. ಒಂದೆರಡು ಗಂಟೆಯೂ ವಿದ್ಯುತ್ ಕೊಡುವುದಿಲ್ಲ. ಹಗಲು ರಾತ್ರಿ ನೀರು ಕಟ್ಟಿ, ಬೆಳೆ ಉಳಿಸಿಕೊಳ್ಳಲು ಜೀವ ಪಣಕ್ಕಿಟ್ಟು ಹೋರಾಡುವಂತಾಗಿದೆ. ಐದು ತಾಸಿನಲ್ಲಿ ಮೂರು ಗಂಟೆಯೂ ಕರೆಂಟ್ ಕೊಡುವುದಿಲ್ಲ. ಅರ್ಧಗಂಟೆಯಲ್ಲಿ ನಾಲ್ಕಾರು ಸಾರಿ ಟ್ರಿಪ್ ಆಗುತ್ತಿದ್ದು, ಮೋಟಾರ್ಗಳು ಹಾಳಾಗಿವೆ. ಬೆಸ್ಕಾಂ ಅಧಿಕಾರಿಗಳಿಗೆ ಕಿಂಚಿತ್ತೂ ಜವಾಬ್ದಾರಿ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾಯಕನಹಳ್ಳಿ ರಾಜಪ್ಪ ಮತ್ತಿತರರು ಮಾತನಾಡಿ, ನಾಲ್ಕಾರು ವರ್ಷಗಳಿಂದ ಇವರನ್ನು ಬೇಡಿ ಸಾಕಾಗಿದೆ. ಬೆಳೆ ನೀರಿಲ್ಲದೇ ಒಣಗಿ ರೈತರು ಕಂಗಾಲಾಗಿದ್ದಾರೆ. ಇಂಥ ಬೇಜವಾಬ್ದಾರಿ ಅಧಿಕಾರಿಗಳಿಂದಲೇ ರೈತರು ಬೀದಿಗೆ ಬಿದ್ದಿದ್ದಾರೆ. ಯಾರಿಗೂ ನಮ್ಮಿಂದ ತೊಂದರೆಯಾಗಿಲ್ಲ. ಆದರೆ ನಮಗೆ ತೊಂದರೆ ಮಾಡಿದರೆ ಸಹಿಸುವುದೇ ಇಲ್ಲ ಎಂದು ಕಿಡಿಕಾರಿದರು.
ಗ್ರಾ.ಪಂ.ಸದಸ್ಯ ಉಳ್ಳಾಗಡ್ಡಿ ಲಕ್ಷ್ಮಣ, ರೈತರು ಒಗ್ಗಟ್ಟಾಗಬೇಕು. ಯಾರಿಗೂ ಹೆದರುವ ಅಗತ್ಯವೇ ಇಲ್ಲ. ಕರೆಂಟ್ ಸರಿಯಾಗಿ ಕೊಡಲು ಆಗಲ್ಲ ಎಂದರೆ ಇವರೇನು ಕೆಲಸ ಮಾಡುತ್ತಾರೆ. ಸಂಬಂಧಪಟ್ಟವರು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು.
ಶೀಘ್ರ ಸರಿಪಡಿಸುವ ಭರವಸೆ; ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತೀರ್ಥೇಶ್, ಓವರ್ ಲೋಡ್ ಸಮಸ್ಯೆಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದೇ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಅಗತ್ಯವಾದ ಸಾಮರ್ಥ್ಯವುಳ್ಳ ಹೆಚ್ವುವರಿ ಮಾರ್ಗ ನಿರ್ಮಿಸಿ ನರಗನಹಳ್ಳಿ ಫೀಡರ್ ಸಮಸ್ಯೆ ನೀಗಲಾಗುತ್ತದೆ. ಹೊನ್ನನಾಯ್ಕನಹಳ್ಳಿ ಫೀಡರ್ ದುರಸ್ತಿ ಮಾಡಿ ಸರಿಪಡಿಸಲಾಗುತ್ತದೆ. ಒಂದೆರಡು ದಿನಗಳಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಸರಿಪಡಿಸಿ, ರೈತರ ಬವಣೆ ನೀಗಿಸುತ್ತೇವೆ ಎಂದು ಭರವಸೆ ನೀಡಿ ರೈತರ ಮನವೊಲಿಸಿದರು.
ಕೆಪಿಟಿಸಿಎಲ್ ಎಇಇ ಉಮೇಶ್, ಎಂಜಿನಿಯರ್ ನಾಗರಾಜ್ ಮತ್ತಿತರರು ಸಮಸ್ಯೆ ಬಗ್ಗೆ ಚರ್ಚಿಸಿದರು.
ಪ್ರತಿಭಟನೆಯಲ್ಲಿ ಮಾಯಕೊಂಡ, ಹೊನ್ನಾ ನಾಯ್ಕನಹಳ್ಳಿ, ಓಬೇನಹಳ್ಳಿ, ಬಾವಿಹಾಳ್ ಗ್ರಾಮದ ನೂರಾರು ರೈತರು ಭಾಗವಹಿಸಿದ್ದರು.
ಪೊಲೀಸರೊಂದಿಗೆ ವಾಗ್ವಾದ : ಸ್ಥಳಕ್ಕೆ ಆಗಮಿಸಿದ ಮಾಯಕೊಂಡ ಪಿಎಸ್ಐ ಅಜ್ಜಪ್ಪ ಮತ್ತು ಸಿಬ್ನಂದಿ, ಬೆಸ್ಕಾಂ ಅಧಿಕಾರಿಗಳಿಗೆ ಪ್ರತಿಭಟನೆಯ ಸ್ಥಳಕ್ಕೆ ಬಂದು ಸಮಾಜಾಯಿಷಿ ನೀಡಲು ಹೇಳಿದಾಗ ಅಧಿಕಾರಿಗಳು ಹೊರಗಡೆ ಕೆಲಸದ ನಿಮಿತ್ತ ತೆರಳಿರುವುದನ್ನು ತಿಳಿಸಿದರು.
ಕೆಪಿಟಿಸಿಎಲ್ಗೆ ಬೀಗ ಹಾಕಿದರೆ ಬೇರೆ ಕಡೆಗೆ ಕರೆಂಟ್ ಕೊಡಲು ತೊಂದರೆಯಾಗುತ್ತದೆ ಎಂದು ಪೊಲೀಸರು ರೈತರ ಮನವೊಲಿಸಲು ಹೋದಾಗ, ರೈತರು ಮತ್ತು ಪೊಲೀಸರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ರೈತರು, ನಾವೇನು ಕಳ್ಳರಲ್ಲ, ನಮ್ಮ ರೈತರ ನೋವು ನಮಗೇ ಗೊತ್ತು, ಒಣಗಿ ಹೋಗಿರುವ ರಾಗಿ, ಅಡಿಕೆ ತೋಟ ನೋಡಿ ಬಂದು ಮಾತನಾಡಿ, ಎಂದರು.
ಕೊನೆಗೂ ಪೊಲೀಸರು ಕೆಪಿಟಿಸಿಎಲ್ ಘಟಕದ ಬೀಗ ತೆಗೆಯಿಸಿ, ಊರುಗಳ ಮಾರ್ಗಕ್ಕೆ ಮಾತ್ರ ಕರೆಂಟ್ ಕೊಡಲು ತಿಳಿಸಿದರು.