ಹೊನ್ನಾಳಿ, ಮಾ.9- ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಮಾರಿಕೊಪ್ಪದ ಹಳದಮ್ಮ ದೇವಿಯ ಮಹಾ ರಥೋತ್ಸವವು ಶುಕ್ರವಾರ ಬೆಳಗ್ಗೆ 5.15 ರ ಬ್ರಾಹ್ಮೀ ಮುಹೂರ್ತದಲ್ಲಿ ಸಹಸ್ರಾರು ಭಕ್ತ ಸಮೂಹದ ಮಧ್ಯೆ ವೈಭವದಿಂದ ಜರುಗಿತು.
ರಥೋತ್ಸವಕ್ಕೂ ಮುನ್ನ ರಥಕ್ಕೆ ಶಾಂತಿ ಪೂಜೆ ನಡೆಸಿ, ಅರ್ಚಕರಿಂದ ರಥಕ್ಕೆ ಬಲಿ ಅನ್ನ ನೈವೇದ್ಯ ಮಾಡಿದ ನಂತರ ಮುಜರಾಯಿ ಅಧಿಕಾರಿಗಳು ಹಾಗು ಗ್ರಾಮದ ಪ್ರಮುಖರು, ಭಕ್ತರು ರಥಕ್ಕೆ ಪೂಜೆ ಮಾಡಿದ ಮೇಲೆ ಹಳದಮ್ಮ ದೇವಿಯ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕಾರಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥದಲ್ಲಿ ಹಳದಮ್ಮ ದೇವಿ ಕೂರುತ್ತಿ ದ್ದಂತೆ ಭಕ್ತರು ಮತ್ತು ಸಕಲ ಜೋಗಮ್ಮ ಮತ್ತು ಜೋಗಪ್ಪ ರುಗಳು ಅಮ್ಮನಿಗೆ ಜಯ ಘೋಷ ಹಾಕಿದರು. ಈ ನಡುವೆ ಭಕ್ತರು ರಥದ ಮೇಲೆ ಬಾಳೆಹಣ್ಣು, ಕಾಳು ಮೆಣಸು, ಮಂಡಕ್ಕಿ ಮತ್ತಿತರೆ ವಸ್ತುಗಳನ್ನು ಬೀಸುತ್ತಾ, `ಉದೋ-ಉದೋ’ ಎಂದು ಕೂಗುತ್ತಾ ತೇರು ಎಳೆದು ತಮ್ಮ ಭಕ್ತಿ ಸಮರ್ಪಿಸಿದರು. ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು, ಬಾಳೆಹಣ್ಣು ನೈವೇದ್ಯ ಮಾಡಿದರು.
ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಶಿಕಾರಿಪುರ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ನಾಡಿನ ವಿವಿಧ ಭಾಗಗಳ ಭಕ್ತರು ದೇವಿ ರಥೋತ್ಸವದಲ್ಲಿ ಪಾಲ್ಗೊಂಡು ಹರಕೆ, ಕಾಣಿಕೆ ಸಮರ್ಪಿಸಿದರು.
ರಥೋತ್ಸವದಲ್ಲಿ ಮುಜರಾಯಿ ಅಧಿಕಾರಿ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಹನುಮಂತಪ್ಪ ಮತ್ತು ಚಿನ್ನಪ್ಪ, ಚನ್ನೇಶ್, ಹಳದಪ್ಪ, ಚಿನ್ನಪ್ಪ, ಮೈಲಪ್ಪ, ಅರ್ಚಕ ಮಲ್ಲಿಕಾರ್ಜುನ್, ಪುಟ್ಟನಗೌಡ, ಪ್ರಭುಗೌಡ, ಪಾಲಾಕ್ಷಪ್ಪ, ರುದ್ರೇಶ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿದ್ದರು.