ಜಗಳೂರಿನಲ್ಲಿ ಶಾಸಕ ಬಿ.ದೇವೇಂದ್ರಪ್ಪ
ಜಗಳೂರು, ಮಾ.10- ಟೀಕಾಕಾರರಿಗೆ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಮೂಲಕ ಉತ್ತರಿಸುವೆ ಎಂದು ಶಾಸಕ ಬಿ. ದೇವೇಂದ್ರಪ್ಪ ಮಾಜಿ ಶಾಸಕರುಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ಮಹಾತ್ಮಾ ಗಾಂಧಿ ಬಸ್ ನಿಲ್ದಾಣದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾನು ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟಿರುವೆ. ವಿರೋಧ ಪಕ್ಷದ ಮೇಲೆ ಗೌರವ ಇದೆ. ಆದರೆ ವಿನಾಕಾರಣ ಆರೋಪಗಳನ್ನು ಸಹಿಸುದಿಲ್ಲ. ಮಾಜಿ ಶಾಸಕರು ಅನುಭವಿಗಳು, ಅನುಭವ ರಹಿತ ಶಾಸಕನಾದ ನನಗೆ ಸಲಹೆ, ಸಹಕಾರ ನೀಡುತ್ತಾ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
`ನಾನು ಶಾಸಕನಾಗಿ ಎರಡು ವರ್ಷಗಳಲ್ಲೇ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಕಟ್ಟಡಕ್ಕೆ ಬಜೆಟ್ನಲ್ಲಿ 50 ಕೋಟಿ ಅನುದಾನ ಸೇರ್ಪಡೆಗೆ ಶ್ರಮಿಸಿರುವೆ. ಕ್ಷೇತ್ರದಲ್ಲಿ ಸಿ.ಸಿ ರಸ್ತೆ ಸೇರಿದಂತೆ ಪಟ್ಟಣ ಅಭಿವೃದ್ಧಿಗೆ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 8 ಕೋಟಿ ಅನುದಾನ ತಂದಿರುವೆ’ ಎಂದರು.
ಮುಖ್ಯ ರಸ್ತೆ
ಅಗಲೀಕರಣ ನಿಶ್ಚಿತ..!
ರಸ್ತೆ ವಿಸ್ತರಣೆ ಕುರಿತು ಸ್ಥಳೀಯ ವರ್ತಕರು, ಆತ್ಮೀಯರು ಸೌಜನ್ಯಕ್ಕಾಗಿ ನನ್ನ ಬಳಿ ಚರ್ಚಿಸಿಲ್ಲ. ನೇರವಾಗಿ ಕೋರ್ಟಿನಲ್ಲಿ 100 ಜನರು ಮೊಕದ್ದಮೆ ಹೂಡಿದ್ದು, ನಾನು ಅಡ್ವೊಕೇಟ್ ಜನರಲ್ ಬಳಿ ಸ್ಪಷ್ಟ ಮಾಹಿತಿ ಪಡೆದಿರುವೆ. 50 ಅರ್ಜಿಗಳು ವಜಾಗೊಂಡಿವೆ. ಉಳಿದವರು ರಸ್ತೆ ಅಗಲೀಕರಣ ಅಭಿವೃದ್ಧಿಗೆ ಸಹಕರಿಸಬೇಕು ಇಲ್ಲವಾದರೆ ಕಾನೂನು ಸಮರ ನಡೆಸಿ ಮಾರ್ಕಿಂಗ್ ನಲ್ಲಿ ಒಂದಿಂಚು ಸಹಕಾರ ನೀಡದೆ ತೆರವುಗೊಳಿಸುವೆ.
ಹಳೇ ತಾಲ್ಲೂಕು ಕಚೇರಿ ನೆಲಸಮಗೊಳಿಸಿ 6 ಕೋಟಿ ವೆಚ್ಚದಲ್ಲಿ ಸರ್ಕಾರಿ ಕಚೇರಿಗಳ ಸಂಕೀರ್ಣ ಮಳಿಗೆ ನಿರ್ಮಿಸಲಾಗುವುದು. ಮಹಾ ರಾಜನ ಹಟ್ಟಿ ಬಳಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ಶಾಲೆ ಕಟ್ಟಡಕ್ಕೆ 16 ಕೋಟಿ ಅನುದಾನ ಸೇರಿದಂತೆ, ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವೆ ಎಂದು ಹೇಳಿದರು.
ತಾಲ್ಲೂಕಿನ ಉದ್ಗಟ್ಟ ಬಳಿ 4.90 ಕೋಟಿ ವೆಚ್ಚದ ಸೇತುವೆ ನಿರ್ಮಾಣ, 20.98 ಕೋಟಿ ವೆಚ್ಚದ ಕರ್ನಾಟಕ ಗೃಹ ಮಂಡಳಿ ನಿವೇಶನ, 20 ಕೋಟಿ ವೆಚ್ಚದ ಪಟ್ಟಣದ ರಾಜ್ಯ ಹೆದ್ದಾರಿ ರಸ್ತೆ ವಿಸ್ತರಣೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕಾಮಗಾರಿ ಕಳಪೆ ಆದಲ್ಲಿ ಗುತ್ತಿಗೆದಾರರನ್ನು ಹೊಣೆ ಮಾಡುತ್ತೇನೆ ಎಂದರು.
ಜಿ.ಪಂ ಮಾಜಿ ಸದಸ್ಯ ಕೆ.ಪಿ ಪಾಲಯ್ಯ ಪ್ರಾಸ್ತಾವಿಕ ಮಾತನಾಡಿ, ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಆಡಳಿತಾವಧಿಯಲ್ಲಿ 57 ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡಿತು. ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಜನಪರ ಆಡಳಿತದೊಂದಿಗೆ ಇಲಾಖೆಗಳಡಿ ಅನುದಾನ ಒದಗಿಸಿ ಕ್ಷೇತ್ರದ ಅಭಿವೃದ್ಧಿ ಕಾಮಗಾ ರಿಗಳಿಗೆ ಮುಂದಾಗಿದ್ದಾರೆ ಎಂದು ಹೇಳಿದರು.
ಈ ವೇಳೆ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯಸಿಂಹ, ಪ.ಪಂ ಅಧ್ಯಕ್ಷ ನವೀನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿ ಕುಮಾರ್, ಪ.ಪಂ ಸದಸ್ಯರಾದ ಆರ್. ತಿಪ್ಪೇಸ್ವಾಮಿ, ಮಂಜಮ್ಮ, ಮಹಮ್ಮದ್ ಅಲಿ, ಆದರ್ಶರೆಡ್ಡಿ, ಶಕೀಲ್ ಅಹಮ್ಮದ್, ಮಂಜುನಾಥ್, ಲಲಿತಮ್ಮ, ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ, ಗೃಹ ಮಂಡಳಿ ಎಇಇ ಸುನಿಲ್ ಕುಮಾರ್, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪಿಡಬ್ಲೂಡಿ ಎಇಇ ನಾಗರಾಜ್ ಇತರರು ಇದ್ದರು.