`ಈ ಬಾರಿ 5 ಲಕ್ಷ ಬಹುಮಾನ ಇಡ್ತಾರಂತ, ಏ ಕಾಮಣ್ಣಾ ಈ ಸಲಾ ನೀ ನಕ್ಕರ್ ನಿನಗ್ ಮೂರು, ನನಗ್ ಎರಡ ಸಾಕಪ್ಪಾ, ನೀ ನಕ್ಕರೆ ನಿನ್ನ ನೋಡಾಕ್ ಸಿನೆಮಾ ನಟಿಯರು ಬರ್ತಾರಂತ, ಅವಾಗ್ ಇಕಿನ್ ಬಿಟ್ಟು ಅದರಾಗ್ ಯಾದರ ಒಂದು ಕ್ಯಾಚ್ ಹಕ್ಯಾಬಹುದು ನಗಪ್ಪಾ ಕಾಮಣ್ಣಾ’
`ನೀನು ಕಾಮಣ್ಣ ಸುರಸುಂದರಾಂಗ ಈ ಗಂಟ್ ಮಾರಾಕಿ ಜೊತಿ ಹೆಂಗ್ ಕಾಲಾ ಕಳೀತಿ, ಅಕೀನ್ ಬಿಡು ಬ್ಯಾರೆ ವ್ಯವಸ್ತಾ ಮಾಡನಾ ಒಂದ್ಸಲಾ ನಗು. ನೀನ್ ಹೂಂ ಅಂದ್ರ್ ನಿನ್ನ ರತಿಗೆ ತಿಂಗಳಾ ಯಾಲ್ಡು ಸಾವ್ರಾ, ಮತ್ ಬಸ್ನ್ಯಾಗ್ ಫ್ರೀ ಓಡಾಡಕ್ ಮಾಡ್ಸಿ ಕೊಡ್ತೇನಿ. ಅಕಿನ್ ತವ್ರ್ ಮನಿಗೆ ಕಳಿಸಿ ಹೊಸಾದು ಗಂಟ್ ಹಾಕ್ಯಂಡು ಗೋವಾಕಡಿ ಹೋಗವಂತಿ. ಒಂದ್ಸಲಾ ನಕ್ಕಬಿಡು.
`ಸಲ್ಮಾನ್ ಖಾನ್ ಗೆ ಇನ್ನು ಮದುವೆ ಆಗಿಲ್ಲಾ. ಹುಡುಗ ಮಸ್ತ್ ತಯಾರಿ ಅದಾನ. ಈ ಕಾಮನ್ನ ಬಿಡು ಅವ್ನ್ ಜೊತಿಗೆ ಮುಂಬೈದಾಗ್ ಮಜಾ ಮಾಡಿ ಕೊಂಡು ಇರುವಂತಿ ನೀನಾದರೂ ನಗು ರತಿ’
ಹೀಗೆ ಹತ್ತು-ಹಲವು ಮಾತುಗಳ ಜೊತೆ ಕುಣಿದು ಕುಪ್ಪಳಿಸಿ ನಗಿಸಲು ಪ್ರಯತ್ನಿಸಿದವರು ಅನೇಕರು. ಈ ಬಾರಿ ನಗಿಸುತ್ತೇವೆ ಎಂದು ತಮ್ಮವ ರೊಂದಿಗೆ ಜೂಜು ಕಟ್ಟಿಕೊಂಡು ಬಂದು ಪ್ರಯತ್ನಿಸಿ ಸೋತವರು ಹಲವರು. ಜಾತಿ, ಧರ್ಮ ಎನ್ನುವ ಭೇದಭಾವ ಮರೆತು ನಗಿಸಲು ಬಂದು, ಬೆನ್ನು ತೋರಿಸಿದವರು ಅನೇಕರು. ಇದೆಲ್ಲಾ ಪ್ರತಿ ವರ್ಷ ಹೋಳಿ ಬಣ್ಣದ ಮೊದಲ ಸಂಜೆ ರಾಣೇಬೆನ್ನೂರು ಕುಂಬಾರ ಓಣಿಯ ರಾಮಲಿಂಗೇಶ್ವರ ಮಠದ ಬಾಗಿಲಲ್ಲಿ ನಡೆಯುವ ಜೀವಂತ ಕಾಮರತಿಯರ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ.
ಇಲ್ಲಿ ಕಳೆದ 65 ವರ್ಷಗಳಿಂದ ನಗಿಸುವ ಪ್ರಯತ್ನ ನಡೆಯುತ್ತಲೇ ಬಂದಿದೆ. ಆದರೆ, ಇದುವ ರೆಗೂ ನಗಿಸಿದ ಉದಾಹರಣೆಗಳಿಲ್ಲ. ಈಗ್ಗೆ 29 ವರ್ಷಗಳಿಂದ ಕೂಡುತ್ತ ಬಂದಿರುವ ಕಾಮನ ಪಾತ್ರಧಾರಿ 50 ವರ್ಷದ ಗದಿಗೆಪ್ಪ ರೊಡ್ಡನವರ, ಹಾಗೂ ರತಿ ಪಾತ್ರಧಾರಿ 40 ವರ್ಷದ ಕುಮಾರ ಹಡಪದ ಸಹ ಇದುವರೆಗೂ ನಗಲಿಲ್ಲ. ಈ ಈರ್ವರೂ ವೇಷ ಧರಿಸುವ ಮೊದಲು, ಕಳಚಿದ ನಂತರ ನಿತ್ಯದ ಒಡನಾಡಿಗಳ ಜೊತೆ ಗಂಭೀರವಾಗಿ ವರ್ತಿಸಿದವರಲ್ಲ. ದಿನದ ಮುಕ್ಕಾಲು ಭಾಗ ಹಾಸ್ಯದೊಂದಿಗೆ ಕಾಲ ಕಳೆದವರು.
ಪಾತ್ರ ಧರಿಸುತ್ತಲೇ ಇವರು ಕಣ್ಣು ಪಿಳುಕಿಸುವ ಶೈಲಿ, ಶಿಸ್ತು, ಸಂಯಮ, ಗಾಂಭೀರ್ಯ, ಕುಳಿತುಕೊಳ್ಳುವ ಭಂಗಿ, ಬೀರುವ ನೋಟ ಎಲ್ಲವೂ ಅಚ್ಚರಿ. ಆತ್ಮೀಯರಷ್ಟೇ ಅಲ್ಲ ಅವರ ಹೆಂಡತಿಯರು, ಕುಟುಂಬದ ಸದಸ್ಯರು, ಜೊತೆಗೆ ಹತ್ತಿರದ ಬಂಧು-ಬಾಂಧವರು ಸಹ ಚಕಿತಗೊಳ್ಳುತ್ತಾರೆ. ಇದಕ್ಕೆಲ್ಲ ಸಾಧನೆ, ಆತ್ಮವಿಶ್ವಾಸ, ಹಿರಿಯರ ಹಾಗೂ ದೇವರ ಆಶೀರ್ವಾದ, ನಮ್ಮಲ್ಲಿ ಈ ಬದಲಾವಣೆ ತರುತ್ತದೆ ಎಂದು ಗದಿಗೆಪ್ಪ ಹಾಗೂ ಕುಮಾರ ಹೇಳುತ್ತಾರೆ.
ದಿನಾಂಕ 14 ಶುಕ್ರವಾರ ಸಂಜೆ 7 ಗಂಟೆಯಿಂದ 12 ಗಂಟೆವರೆಗೆ ಕೂಡುವ ಈ ಜೀವಂತ ಕಾಮರತಿಯರನ್ನು ಇದುವರೆಗೂ ಯಾರಿಂದಲೂ ನಗಿಸಲು ಆಗಿಲ್ಲ. ಇದು ನಮ್ಮ ರಾಣೇಬೆನ್ನೂರು ನಗರದ ಘನತೆಯನ್ನು ದೇಶದಾ ದ್ಯಂತ ಹೆಚ್ಚಿಸುವ ಕಾರ್ಯಕ್ರಮ ವಾಗಿದೆ. ಈ ಕಲಾವಿದರೂ ಇದುವರೆಗೂ ಯಾವುದೇ ರೀತಿಯಲ್ಲಿ ಸಂಭಾವನೆ ಪಡೆಯದೆ ಭಕ್ತಿ, ಭಾವದೊಂದಿಗೆ ನಡೆಸುತ್ತಾ ಬಂದಿದ್ದಾರೆ. ಇವರ ಪ್ರತಿಭೆಯನ್ನು ಸರ್ಕಾರ ಗುರುತಿಸಬೇಕಿದೆ ಎನ್ನುವ ಬಯಕೆ ಕಮಿಟಿಯ ಮಲ್ಲಿಕಾರ್ಜುನ ಪೂಜಾರ ಸೇರಿದಂತೆ ಬಹಳಷ್ಟು ಜನರದ್ದಾಗಿದೆ.
– ಮನೋಹರ ಮಲ್ಲಾಡದ, ರಾಣೇಬೆನ್ನೂರು.