ಬಿಸಿಯೂಟ ತಯಾರಕರ ಅನಿರ್ದಿಷ್ಟಾವಧಿ ಧರಣಿ

ಬಿಸಿಯೂಟ ತಯಾರಕರ ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು, ಮಾ.6- ಬಿಸಿಯೂಟ ತಯಾರಕರಿಗೆ 2025-26ನೇ ಬಜೆಟ್‌ನಲ್ಲಿ ವೇತನ ಹೆಚ್ಚಿಸುವ ಜತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು.

ಈ ವೇಳೆ ಮಾತನಾಡಿದ ಧರಣಿ ನಿರತರು, ರಾಜ್ಯದಲ್ಲಿ ಕಳೆದ 23 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಧ್ಯಾಹ್ನ ಊಟದ ಯೋಜನೆ ಅಡಿಯಲ್ಲಿ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕ ಮಹಿಳೆಯರು ಅತ್ಯಂತ ಕಡಿಮೆ ಗೌರವ ಸಂಭಾವನೆಗೆ ದುಡಿಯುತ್ತಿದ್ದಾರೆ ಎಂದರು.

ಮುಖ್ಯ ಅಡುಗೆಯವರಿಗೆ ಮಾಸಿಕ 3700 ಹಾಗೂ ಸಹಾಯಕ ಅಡುಗೆಯವರಿಗೆ 3600 ಮಾತ್ರ ಗೌರವ ಸಂಭಾವನೆ ಬರುತ್ತಿದ್ದು, ಇದರಿಂದ ಬಿಸಿಯೂಟ ತಯಾರಕ ಮಹಿಳೆಯರು ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ ಎಂದು ತಿಳಿಸಿದರು.

ಬಿಸಿಯೂಟ ತಯಾರಕ ಮಹಿಳೆಯ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ 2025-26ರ ಬಜೆಟ್‌ನಲ್ಲಿ ಕನಿಷ್ಟ ವೇತನ 6 ಸಾವಿರಕ್ಕೆ ಹೆಚ್ಚಿಸಬೇಕು, ನಿವೃತ್ತ ಬಿಸಿಯೂಟ ತಯಾರಕರಿಗಾಗಿ ಇಡಗಂಟು ಹಣ ಜಾರಿ ಮಾಡಬೇಕು. ಈಗಾಗಲೇ ಘೋಷಿಸಿದ 30ರಿಂಮ 40 ಸಾವಿರ ಇಡಗಂಟು ಹಣವನ್ನು ಕನಿಷ್ಠ 2.5 ಲಕ್ಷಕ್ಕೆ ಏರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಡುಗೆ ತಯಾರಿಸುವಾಗ 15ಕ್ಕೂ ಹೆಚ್ಚು ಜನ ಬಿಸಿಯೂಟ ತಯಾರಕರು ಕುಕ್ಕರ್‌ ಸ್ಪೋಟದಿಂದ ಮರಣ ಹೊಂದಿದ್ದಾರೆ. ಇಂತಹ ಕುಟುಂಬಕ್ಕೆ ಈ ವರೆಗೂ ಯಾವ ಪರಿಹಾರವೂ ಬಂದಿರುವುದಿಲ್ಲ. ಆದ್ದರಿಂದ ಕೂಡಲೇ ಮರಣ ಪರಿಹಾರವಾಗಿ 10 ಲಕ್ಷ ರೂ. ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು 50 ಸಾವಿರದಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ಎಸ್‌.ಡಿ.ಎಂ.ಸಿ ಅಧ್ಯಕ್ಷರ ಬ್ಯಾಂಕ್‌ ಜಂಟಿ ಖಾತೆ ತೆರೆಯಲು ಆದೇಶಿಸಿರುವುದನ್ನು ಕೂಡಲೇ ರದ್ದುಗೊಳಿಸಬೇಕು. ಎಲ್ಲಾ ಬಿಸಿಯೂಟ ತಯಾರಕರರಿಗೂ ಉಪಧನ ಜಾರಿಗೊಳಿಸಬೇಕೆಂದು ಕೋರಿದ್ದಾರೆ.

ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರ ಕೈ ಬಿಡಬೇಕು. ಮೊಟ್ಟೆ ಸುಲಿಯುವ ಭತ್ಯೆ 1 ರೂಪಾಯಿಗೆ ಹೆಚ್ಚಿಸಬೇಕು. ಪ್ರತಿ ತಿಂಗಳು 5ನೇ ತಾರೀಖಿಗೆ ವೇತನ ಪಾವತಿಸಬೇಕು ಮತ್ತು ವಿನಾ ಕಾರಣ ಕಿರುಕುಳ ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.

error: Content is protected !!