ಅಂಬೇಡ್ಕರ್ ಮಹಾರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಕೆ.ಪಿ.ಪಾಲಯ್ಯ ಅಭಿಮತ
ಜಗಳೂರು, ಮಾ.4- ಸಮಾನತೆ ಸಾರುವ ಶ್ರೇಷ್ಠ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರನ್ನು ಸ್ಮರಿಸುವ ಜಾಗರಣೆ ಪ್ರಸ್ತುತ ದಿನಗಳಲ್ಲಿ ಅವಶ್ಯಕವಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಗತಿ ಪರ ಸಂಘಟನೆ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಮಹಾ ಶಿವರಾತ್ರಿ ನಿಮಿತ್ತ ಹಮ್ಮಿಕೊಂಡಿದ್ದ `ಅಂಬೇಡ್ಕರ್ ಮಹಾರಾತ್ರಿ ಜಾಗರಣೆ’ ವಿಶೇಷ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಭಾರತವು ಬಹು ಸಂಸ್ಕೃತಿಯ ನೆಲೆ ಬೀಡಾಗಿದೆ. ಇಲ್ಲಿ ಜಾತ್ಯತೀತ ಮತ್ತು ಧರ್ಮಾತೀತವಾಗಿ ಶಾಂತಿ, ಸಾಮರಸ್ಯದಿಂದ ಧಾರ್ಮಿಕ ಹಬ್ಬಗಳು ಜರುಗಬೇಕು ಎಂದರು.
ದೇವರು, ಧರ್ಮದ ಹೆಸರಿನಲ್ಲಿ ಜನರ ಮೇಲಾಗುವ ಭಾವನಾತ್ಮಕ ಹಲ್ಲೆಗಳು, ಮೌಢ್ಯತೆ ಹಾಗೂ ಕಂದಾಚಾರಗಳು ಕೊನೆಯಾಗಬೇಕು. ಮಹಿಳೆಯರು ಮತ್ತು ಶೋಷಿತ ವರ್ಗಗಳು ಸಮಾಜದ ಮುಖ್ಯವಾಹಿನಿಗೆ ಬರಲಿ ಎಂದು ಹೇಳಿದರು.
ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಿ. ಬಸವರಾಜ್ ಮಾತನಾಡಿ, ಜನರು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ದೇಶದಲ್ಲಿ ಮನುಸ್ಮೃತಿ ವಿಜೃಂ ಭಿಸುತ್ತಿದ್ದ ವೇಳೆ ಅತ್ಯಂತ ಶೋಷಣೆಗೊಳಗಾಗಿದ್ದ ಮಹಿಳೆಯರಿಗೆ ಸಂವಿಧಾನಬದ್ದ ಧಾರ್ಮಿಕ ಹಕ್ಕು ನೀಡಿ, ದೇವಾಲಯಗಳಿಗೆ ಪ್ರವೇಶ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಸ್ಮರಿಸದೇ ದೇವಾಲಯಗಳ ಮುಂದೆ ಸಾಲಾಗಿ ನಿಂತು, ಮೌಢ್ಯಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ದಲಿತ ಮುಖಂಡ ಬಿ. ಶಂಭುಲಿಂಗಪ್ಪ ಮಾತನಾಡಿ, ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ, ಮೀಸಲಾತಿ ಅನು ಭವಿಸುವ ಎಲ್ಲಾ ವರ್ಗದವರು ಇಂತಹ ವಿನೂ ತನ ಕಾರ್ಯ ಕ್ರಮಗಳಲ್ಲಿ ಭಾಗವಹಿಸಬೇಕು. ಈ ಬಗ್ಗೆ ಸಂಘಟನೆಗಳು ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ವೇಳೆ ಪ್ರಾಚಾರ್ಯ ನಾಗಲಿಂಗಪ್ಪ, ವಕೀಲ ಸಣ್ಣ ಓಬಯ್ಯ, ನಾಗೇಶ್, ದೊಣೆಹಳ್ಳಿ ಗ್ರಾ.ಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಸಂಘಟನೆಯ ಮುಖಂಡರಾದ ಚಿಕ್ಕಮ್ಮನಹಟ್ಟಿ ಮಂಜಣ್ಣ, ಕುಬೇಂದ್ರಪ್ಪ, ಗುತ್ತಿದುರ್ಗ ರುದ್ರೇಶ್, ಅಹಮ್ಮದ್ ಅಲಿ, ಎಂ.ರಾಜಪ್ಪ, ಮಾದಿಹಳ್ಳಿ ಮಂಜಪ್ಪ, ಸತೀಶ್ ಮಲೇಮಾಚಿಕೆರೆ, ಸಿದ್ದಮ್ಮನಹಳ್ಳಿ ಬಸವರಾಜ್, ವಕೀಲ ಅಂಜಿನಪ್ಪ, ಕುಮಾರ್ ಇದ್ದರು.