ಅಭಿವೃದ್ದಿ ಹೆಸರಲ್ಲಿ ಬೋಗಸ್ ಲೆಕ್ಕ

ಅಭಿವೃದ್ದಿ ಹೆಸರಲ್ಲಿ ಬೋಗಸ್ ಲೆಕ್ಕ

ಜಗಳೂರು ಪ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಆರೋಪ 

ಜಗಳೂರು, ಮಾ. 2- ಪಟ್ಟಣದಲ್ಲಿ  ಯಾವುದೇ ಅಭಿವೃದ್ದಿ ಕೆಲಸಗಳು ಆಗದೇ ಇದ್ದರೂ ಅಭಿವೃದ್ದಿ ಹೆಸರಿನಲ್ಲಿ ಬೋಗಸ್ ಬಿಲ್ ಲೆಕ್ಕ ತೋರಿಸಲಾಗಿದ್ದು, ವ್ಯಾಪಕ ಅವ್ಯವಹಾರವಾಗಿದೆ ಎಂದು ಪ.ಪಂ ಮುಖ್ಯಾಧಿಕಾರಿ  ಹಾಗೂ ಪ.ಪಂ ಅಧ್ಯಕ್ಷರ ವಿರುದ್ದ ಪಕ್ಷಭೇದ ಮರೆತು ಸರ್ವಸದಸ್ಯರುಗಳು ಆರೋಪಿಸಿದರು.

ಗುರುವಾರ ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪ.ಪಂ ಅಧ್ಯಕ್ಷ ನವೀನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ  ಆಡಳಿತ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. 

ಪಟ್ಟಣ ಪಂಚಾಯಿತಿಗೆ ಆಸ್ತಿ ತೆರಿಗೆ, ನೀರಿನ ಕಂದಾಯ, ಮಳಿಗೆ ತೆರಿಗೆ, ಹರಾಜುದಾರರಿಂದ ಬರುವ ಆದಾಯ, ಫ್ಲೆಕ್ಸ್ ಅಳವಡಿಕೆಗಳ ವಸೂಲಿ, ಸೇರಿದಂತೆ ವಿವಿಧ ಮೂಲಗಳಿಂದ ಬರುವ ಸಮಗ್ರ ಆದಾಯದ ಲೆಕ್ಕವಿಲ್ಲ,  ಹೊರಗುತ್ತಿಗೆ ನೌಕರರ ವೇತನ, ಸಕ್ಕಿಂಗ್ ಮಷಿನ್ ರಿಪೇರಿ, ಡೀಸೆಲ್ ಬಿಲ್ ಇತರೆ ಖರ್ಚುಗಳನ್ನು ಮಾತ್ರ ಪುಸ್ತಕದಲ್ಲಿ ತೋರಿಸಲಾಗಿದೆ.

ಪ್ಲಾಸ್ಟಿಕ್ ಬಳಕೆಗೆ ದಂಡ ವಸೂಲಿ ಲೆಕ್ಕವೇ ಇಲ್ಲ. ಚರಂಡಿ ಸ್ವಚ್ಛತೆ, ಬ್ಲೀಚಿಂಗ್ ಪೌಡರ್ ಸಿಂಪರಣೆ, ಬೀದಿ ದೀಪ ಸಮರ್ಪಕ ನಿರ್ವಹಣೆ ಎಲ್ಲವೂ ಕಣ್ಮರೆಯಾಗಿವೆ ಎಂದು ಸದಸ್ಯರು ಪಕ್ಷಾತೀತವಾಗಿ ಧ್ವನಿಗೂಡಿಸಿದರು.

ಆರೋಗ್ಯ ನಿರೀಕ್ಷಕರ ನಿರ್ಲಕ್ಷ್ಯ: ಪಟ್ಟಣದ ವಾರ್ಡ್ ಗಳಲ್ಲಿ ಸ್ವಚ್ಛತೆಯಿಲ್ಲ. ತೆರಿಗೆ ಹಣ ವ್ಯಯ ಮಾಡಿ ವಾಹನಗಳ ಡೀಸೆಲ್ ಲಕ್ಷಗಟ್ಟಲೇ ಲೆಕ್ಕ ಬರೆದಿರುವಿರಿ. ಆರೋಗ್ಯ ನಿರೀಕ್ಷಕರ ನಿರ್ಲಕ್ಷ್ಯದಿಂದ ಸ್ವಚ್ಛತೆಯಿಲ್ಲದಂತಾಗಿದೆ. ಸಾರ್ವಜನಿಕರಿಗೆ, ಸದಸ್ಯರಿಗೆ ಸ್ಪಂದಿಸದೇ ಮನಬಂದಂತೆ ಅಧಿಕಾರಿಗಳ ವರ್ತನೆ ಸರಿಯಲ್ಲ ಎಂದು ಸದಸ್ಯರಾದ ಆರ್.ತಿಪ್ಪೇಸ್ವಾಮಿ, ರೇವಣ್ಣ, ರಮೇಶ್ ರೆಡ್ಡಿ, ಮಂಜಮ್ಮ, ಲಲಿತಮ್ಮ  ತರಾಟೆ ತೆಗೆದುಕೊಂಡರು.

ಕೆಲಸ ನೀಡಲು ಜಾತಿ ತಾರತಮ್ಯ: ತಳಸಮು ದಾಯದ  ಹೊರಗುತ್ತಿಗೆ ನೌಕರರನ್ನು ಕಸಗುಡಿಸಲು ನಿಯೋಜಿಸಿ ಮೇಲ್ವರ್ಗದ ಜಾತಿ ನೌಕರರನ್ನು ಕಛೇರಿ ಕೆಲಸಗಳಿಗೆ ನಿಯೋಜನೆ ಮಾಡಿರುವುದು ಜಾತಿ ತಾರತಮ್ಯಕ್ಕೆ ಸಾಕ್ಷಿಯಾಗಿದೆ ಎಂದು  ಮುಖ್ಯಾಧಿಕಾರಿ ವಿರುದ್ದ ಸದಸ್ಯ ದೇವರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ ಎಂದು ಮುಖ್ಯಾಧಿಕಾರಿ ಆಡಳಿತ ವೈಖರಿ ಬಗ್ಗೆ ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಲೋಕಮ್ಮ, ಸದಸ್ಯರಾದ ಆರ್.ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ಶಕೀಲ್  ಅಹಮ್ಮದ್, ಸರೋಜಮ್ಮ, ಮಹಮ್ಮದ್ ಅಲಿ, ನಿರ್ಮಲಕುಮಾರಿ, ಲುಕ್ಮಾನ್ ಖಾನ್, ವಿಶಾಲಾಕ್ಷಿ, ಆದರ್ಶ, ನಾಮನಿರ್ದೇಶಿತ ಸದಸ್ಯರಾದ ಶಾಂತಪ್ಪ, ಜಯ್ಯಣ್ಣ, ತಾನಾಜಿ ಗೋಸಾಯಿ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಭಾಗವಹಿಸಿದ್ದರು.

error: Content is protected !!