ಹರಿಹರ: ಸಮನ್ವಯ ಸಭೆಯಲ್ಲಿ ನಗರಸಭಾಧ್ಯಕ್ಷೆ ಕವಿತಾ ಮಾರುತಿ
ಹರಿಹರ, ಮಾ.2- ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಕಿವಿಮಾತು ಹೇಳಿದರು.
ನಗರಸಭೆಯ ಸಭಾಂಗಣದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಡೆದ ವಿಶೇಷಚೇತನರ ಸಮನ್ವಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ವಿಕಲಚೇತನರ ಸಬಲೀಕರಣದ ದೃಷ್ಟಿಯಿಂದ ದ್ವಿಚಕ್ರ ವಾಹನ, ಸ್ವಯಂ ಉದ್ಯೋಗಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲದ ಸೌಲಭ್ಯಗಳ ಜೊತೆಗೆ ಸರ್ಕಾರ ಯಾವುದೇ ರೀತಿಯ ಯೋಜನೆಯನ್ನು ರೂಪಿಸಿದ ಸಂದ ರ್ಭದಲ್ಲಿ ಶೇ. 5 ರಷ್ಟು ಮೀಸಲು ನಿಗದಿಪ ಡಿಸಿದೆ. ಅಲ್ಲದೇ ನಗರಸಭೆ ವತಿಯಿಂದ ದ್ವಿಚಕ್ರ ವಾಹನ ವಿತರಣೆ ಮಾಡಲು ಈಗಾಗಲೇ ಅರ್ಜಿಯನ್ನು ಸ್ವೀಕರಿಸಲಾಗಿದೆ, ಆದಷ್ಟು ಶೀಘ್ರವಾಗಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷ ಗುತ್ತೂರು ಜಂಬಣ್ಣ ಮಾತನಾಡಿ, ವಿಕಲಚೇತನರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಎಚ್ಚರ ವಹಿಸಬೇಕು. ನಗರಸಭೆಯ ಎಲ್ಲಾ ಸದಸ್ಯರು ಯಾವತ್ತೂ ನಿಮ್ಮ ಜೊತೆಗೆ ಇರುತ್ತಾರೆ ಹಾಗಾಗಿ ಯಾರೂ ದೃತಿಗೆಡುವುದು ಬೇಡ ಎಂದು ವಿಕಲಚೇತನರಿಗೆ ಭರವಸೆ ನೀಡಿದರು.
ವಿಕಲಚೇತನ ಇಲಾಖೆ ಅಧಿಕಾರಿ ಶಶಿಕಲಾ ಮಾತನಾಡಿ, ಡಿಸೆಂಬರ್ 3ರಂದು ವಿಶ್ವ ವಿಕಲ ಚೇತನರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನಾಚರಣೆ ಉದ್ದೇಶ ಎಲ್ಲರಿಗೂ ಸಮಾನವಾಗಿ ಅವಕಾಶ ಸಿಗಬೇಕು ಎಂಬುದಾಗಿದೆ.
ಗ್ರಾ.ಪಂ ಸೇರಿದಂತೆ ಸ್ಥಳೀಯವಾಗಿ ಸಮಾನ ಅವಕಾಶ ಮತ್ತು ಸೌಲಭ್ಯಗಳ ಅರಿವು ಮೂಡಿಸಲು ಸಮನ್ವಯ ಸಭೆ ಆಯೋಜಿಸಲಾಗಿದೆ. ತಾಲ್ಲೂಕಿನಲ್ಲಿ ಸುಮಾರು 880 ವಿಕಲಚೇತನರು ಇದ್ದು, ಅವರ ಸಬಲೀಕರಣ ದೃಷ್ಟಿಯಿಂದ ಸರ್ಕಾರ ಒದಗಿಸಿರುವ ಸೌಲಭ್ಯಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ನಗರಸಭೆ ಎಇಇ ವಿನಯ್ ಕುಮಾರ್ ಹಾಜರಿದ್ದರು.
ಅಧ್ಯಕ್ಷ-ಉಪಾಧ್ಯಕ್ಷರ ಆಕ್ರೋಶ: ಸಭೆಯಲ್ಲಿ ಭಾಗವಹಿಸಿದ್ದ ಅಂಗವಿಕಲರಿಗೆ ಕುಡಿಯುವ ನೀರು, ಬಿಸ್ಕತ್ತು ಮತ್ತು ಚಹ ವ್ಯವಸ್ಥೆ ಮಾಡುವಂತೆ ನಗರಸಭೆ ಅಧಿಕಾರಿ ಜಗದೀಶ್ ಎಂಬುವರಿಗೆ, ಅಧ್ಯಕ್ಷೆ ಕವಿತಾ ಮಾರುತಿ ತಿಳಿಸಿದಾಗ, ಇದು ನಮ್ಮ ಕಾರ್ಯಕ್ರಮ ಆಗಿರುವುದಿಲ್ಲ ಮತ್ತು ಪೌರಾಯುಕ್ತರು ಸಭೆಗೆ ಬಂದಿಲ್ಲ ಅವರಿಗೆ ಕೇಳಿ ತರಿಸುವುದಾಗಿ ಹೇಳುತ್ತಿದ್ದಂತೆ, ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಜಂಬಣ್ಣ ಅಧಿಕಾರಿಯ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಮಾರಂಭವನ್ನು ನಿಲ್ಲಿಸಿದರು. ತದನಂತರ ನೀರು, ಬಿಸ್ಕತ್ತು ಮತ್ತು ಚಹ ನೀಡಿದ ಮೇಲೆ ಪುನಃ ಸಮಾರಂಭವನ್ನು ಆರಂಭಿಸಿದ ಘಟನೆ ನಡೆಯಿತು.
ಹಣ ಕೇಳುವ ಅಧಿಕಾರಿಗಳು: ಹಲವಾರು ವರ್ಷಗಳಿಂದ ನಮಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡಿರುವುದಿಲ್ಲ. ಐಡಿ ಕಾರ್ಡ್‌ಗೆ 2017ರಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಆದರೆ ಇದುವರೆಗೂ ಬಂದಿಲ್ಲ ಮತ್ತು ಸರ್ಕಾರದ ಸೌಲಭ್ಯಗಳನ್ನು ಕೇಳಲು ಕಚೇರಿಗೆ ಹೋದಾಗ ಅಧಿಕಾರಿಗಳು ಹಣವನ್ನು ಕೇಳುತ್ತಾರೆ ಎಂದು ನೀಲಪ್ಪ ಎಂಬುವರು ಅಲವತ್ತುಕೊಂಡರು.