ಪ್ರತಿಭೆಗಳ ನೃತ್ಯ, ಸಂಗೀತ ಸೇವೆ
ದಾವಣಗೆರೆ, ಫೆ.25- ವಿನಾಯಕ ಎಜುಕೇಶನ್ ಟ್ರಸ್ಟ್, ಅಥಣಿ ಮತ್ತು ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಅಥಣಿ ಸ್ನಾತಕೋತ್ತರ ಕೇಂದ್ರ, ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಹಾಗೂ ಚಿರಂತನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸಂಗೀತ, ನೃತ್ಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ನಾಳೆ ದಿನಾಂಕ 26 ರ ಬುಧವಾರ ಸಂಜೆ 7.30 ರಿಂದ ರಾತ್ರಿ 11.30 ರವರೆಗೆ ಸತತವಾಗಿ ಅಥಣಿ ಕಾಲೇಜಿನ ಆವರಣದಲ್ಲಿರುವ ಅತಿ ಎತ್ತರದ ಶಿವನ ಮೂರ್ತಿಯ ಮುಂಭಾಗ ಶಿವಭಕ್ತಿ ಬಿಂಬಿಸುವ ಹಲವು ಕಲಾ ಪ್ರದರ್ಶನಗಳನ್ನು ಒಳಗೊಂಡ ಶಿವರಾತ್ರಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿರಂತನ ಸಂಸ್ಥೆ ಅಧ್ಯಕ್ಷರಾದ ಶ್ರೀಮತಿ ದೀಪಾ ಎನ್. ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕೈಗಾರಿಕೋದ್ಯಮಿ ಡಾ. ಅಥಣಿ ಎಸ್. ವೀರಣ್ಣ, ಹಿರಿಯ ಪತ್ರಕರ್ತ ಸಿದ್ಧಯ್ಯ ಹಿರೇಮಠ ಮತ್ತಿತರರು ಆಗಮಿಸಲಿದ್ದಾರೆ.
ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ಭಕ್ತಿ ನೃತ್ಯ, ಭರತನಾಟ್ಯ, ವೇಷಭೂಷಣ ಸ್ಪರ್ಧೆ, ಶ್ಲೋಕ, ವಚನ ಪಠಣಕ್ಕೆ ವಿವಿಧ ವಿಭಾಗಗಳಲ್ಲಿ ಆನ್‌ಲೈನ್ ಸ್ಪರ್ಧೆ ಏರ್ಪಡಿಸಲಾಗಿತ್ತು. 180 ಕ್ಕೂ ಹೆಚ್ಚು ಆಡಿಷನ್ ವಿಡಿಯೋಗಳು ಬಂದಿದ್ದವು. ಹಿರಿಯರಾದ ಡಾ.ಬಿ.ಟಿ. ಅಚ್ಯುತ್, ಡ್ಯಾನ್ಸ್ ಮಾಸ್ಟರ್ ಅಭಿಷೇಕ್ ಮಠದ್, ಮೈಸೂರಿನ ಗುರು ಸೌಮ್ಯ ರಾಣಿ ತೀರ್ಪುಗಾರರಾಗಿ 40 ಕ್ಕೂ ಹೆಚ್ಚು ಕಲಾವಿದರು ಹಾಗೂ ಕಲಾ ತಂಡಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ಮೂರು ವರ್ಷದ ಮಕ್ಕಳಿಂದ ಹಿಡಿದು 74 ವರ್ಷ ವಯಸ್ಸಿನ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಉಚಿತ ಪ್ರವೇಶವಿದ್ದು, ಕಲಾಸಕ್ತರು ಆಗಮಿಸುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ರಕ್ಷಾ ರಾಜಶೇಖರ್, ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಕೆ. ಷಣ್ಮುಖ, ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಗುರು, ಬಿ. ವೆಂಕಟೇಶ್ ಉಪಸ್ಥಿತರಿದ್ದರು.