ಬಾಳೆಹೊನ್ನೂರು, ಫೆ. 24- ಹಾಸನ ಜಿಲ್ಲೆ ಕರ್ಪೂರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ತಮ್ಮ 69ನೇ ವಯಸ್ಸಿನಲ್ಲಿ ಹಠಾತ್ತಾಗಿ ಹೃದಯಾಘಾತದಿಂದ ಶಿವೈಕ್ಯರಾಗಿರುವುದಕ್ಕೆ ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಕರ್ಪೂರವಳ್ಳಿ ಜಂಗಮ ಮಠವು ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು, ಅವರ ಉತ್ತರಾಧಿಕಾರಿ ನೇಮಕದ ಬಗ್ಗೆ ತಮ್ಮೊಂದಿಗೆ ಇತ್ತೀಚೆಗೆ ಚರ್ಚಿಸಿ ದೃಢಪಡಿಸಿದ್ದರು.
ಶ್ರೀಗಳು ಶ್ರೀ ರಂಭಾಪುರಿ ಪೀಠದ ಮೇಲೆ ಅಪಾರ
ಅಭಿಮಾನ ಹೊಂದಿದವರಾಗಿದ್ದು, ಶ್ರೀ ಪೀಠದ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ವೀರಶೈವ-ಗುರು ಪೀಠ ಪರಂಪರೆಯಂತೆ ಅವರ ಕ್ರಿಯಾ ಸಮಾಧಿ ಹಾಗೂ ಉತ್ತರಾಧಿಕಾರಿ ನಿಯುಕ್ತಿ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.