ಮಲೇಬೆನ್ನೂರು, ಫೆ.23- ದೇವರಬೆಳಕೆರೆ ಪಿಕಪ್ ಡ್ಯಾಂನ ಹೆಚ್.ಸಿದ್ದವೀರಪ್ಪ ನಾಲೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಅವರು ತಮ್ಮ ಸ್ವಂತ ಹಣದಲ್ಲಿ ಇಟಾಚಿಯಿಂದ ಸ್ವಚ್ಛಗೊಳಿಸುವ ಮೂಲಕ ರೈತರಿಗೆ ನೆರವಾಗಿದ್ದಾರೆ.
ನಾಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದರಿಂದ ನೀರು ಮುಂದಕ್ಕೆ ಹೋಗುತ್ತಿರಲಿಲ್ಲ. ಇದರಿಂದಾಗಿ ದೇವರ ಬೆಳಕೆರೆ, ಕಡ್ಲೆಗೊಂದಿ, ಕೆ.ಬೇವಿನಹಳ್ಳಿ, ಬನ್ನಿಕೋಡು, ಷಂಷೀಪುರ, ಬೆಳ್ಳೂಡಿ, ಹನಗವಾಡಿ, ಗುತ್ತೂರು, ಕೋಡಿಹಳ್ಳಿ ಗ್ರಾಮಗಳ ಜಮೀನುಗಳಿಗೆ ನೀರು ತಲುಪದಂತಾಗಿತ್ತು. ನಾಲೆಯಲ್ಲಿ ಹುಳು ಎತ್ತುವ ಬಗ್ಗೆ ರೈತರು ನೀರಾವರಿ ಇಲಾಖೆಗೆ ಸಾಕಷ್ಟು ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕರಲಿಲ್ಲ.
ಈ ವಿಷಯ ತಿಳಿದ ಚಂದ್ರಶೇಖರ್ ಪೂಜಾರ್ ಅವರು, ಹೆಚ್.ಸಿದ್ದವೀರಪ್ಪ ನಾಲೆ ಪಾತ್ರದ ಹಳ್ಳಿಗಳ ರೈತರ ಸಮ್ಮುಖದಲ್ಲಿ ಇಟಾಚಿಯಿಂದ ನಾಲೆಯಲ್ಲಿ ತುಂಬಿಕೊಂಡಿದ್ದ ಹೂಳು ಎತ್ತಿಸಿ, ನೀರು ಸರಾಗವಾಗಿ ಮುಂದೆ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ಹೆಚ್.ಸಿದ್ದವೀರಪ್ಪ ನಾಲೆ ಬಳಿ ಬೆಳ್ಳೂಡಿ, ಹನಗವಾಡಿ, ಷಂಷೀಪುರ, ಬನ್ನಿಕೋಡು, ಕೆ.ಬೇವಿನಹಳ್ಳಿ, ಕಡ್ಲೆಗೊಂದಿ, ದೇವರಬೆಳಕೆರೆ ಗ್ರಾಮಗಳ ರೈತರು ಚಂದ್ರಶೇಖರ್ ಪೂಜಾರ್ ಅವರನ್ನು ಸನ್ಮಾನಿಸಿ, ಗೌರವಿಸಿದ್ದಾರೆ.
ಕಳೆದ ವರ್ಷವೂ ಚಂದ್ರಶೇಖರ್ ಅವರು, ನಂದಿತಾವರೆ ಬಳಿ ಇರುವ ದೇವರಬೆಳಕೆರೆ ಪಿಕಪ್ ಡ್ಯಾಂ ನಾಲೆಯಲ್ಲಿ ತುಂಬಿಕೊಂಡಿದ್ದ ಹೂಳು ಸ್ವಚ್ಛಗೊಳಿಸಿ, ರೈತರಿಗೆ ನೆರವಾಗಿದ್ದನ್ನು ಈ ವೇಳೆ ಸ್ಮರಿಸಬಹುದು.