ಶಿಕ್ಷಣದಿಂದ ಬಂಜಾರ ಸಮುದಾಯ ಮುಂದೆ ಬರಲು ಸಾಧ್ಯ

ಶಿಕ್ಷಣದಿಂದ ಬಂಜಾರ ಸಮುದಾಯ ಮುಂದೆ ಬರಲು ಸಾಧ್ಯ

286ನೇ ಸಂತ ಸೇವಾಲಾಲ್ ಜಯತ್ಯುತ್ಸವ ಕಾರ್ಯಕ್ರಮದಲ್ಲಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ

ಚನ್ನಗಿರಿ, ಫೆ.23- ಸಂತ ಸೇವಾಲಾಲ್ ಅವರ ಆದರ್ಶದ ಬದುಕು ಎಲ್ಲರಿಗೂ ಮಾದರಿಯಾಗಿದ್ದು, ಶಿಕ್ಷಣದಿಂದ ಮಾತ್ರ ಈ ಸಮುದಾಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು ಎಂದು ಚಿತ್ರದುರ್ಗ ಬಂಜಾರ ಗುರು ಪೀಠದ ಪೀಠಾಧ್ಯಕ್ಷ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅಭಿಪ್ರಾಯಪಟ್ಟರು.

ಚನ್ನಗಿರಿ ತಾಲ್ಲೂಕು ಕಬ್ಬಳ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಶ್ರೀ ಸೇವಾಲಾಲ್ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಅವರ 286ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತು ಇಂದು ಬಂಜಾರ ಸಮಾಜವನ್ನು ಕಲೆ, ಸಂಸ್ಕೃತಿ, ಸಾಹಿತ್ಯದ ಹಿನ್ನೆಲೆಯಲ್ಲಿ ಗುರುತಿಸಲು ಸೇವಾಲಾಲ್ ಅವರು ಬದುಕಿದ ರೀತಿಯೇ ಕಾರಣ. ಶಾಂತಿ, ಅಂಹಿಸೆಯ ತತ್ವ ಸಾರಿದ ಸೇವಾಲಾಲ್‌ ಯಾರಿಗೂ ಕೇಡನ್ನು ಬಯಸಿಲ್ಲ. ಇವರ ತತ್ವವನ್ನು ನಾವು ಅನುಸರಿಸಬೇಕು ಎಂದರು.‌

ಸಮಾಜ ಸುಧಾರಣೆಯ ಬೋಧನೆ ಜತೆಗೆ ಸಮುದಾಯದ ಸಂಘಟನೆಗೂ ಆದ್ಯತೆ ನೀಡಿದ ಸೇವಾಲಾಲರು,  ಶಿಕ್ಷಣದಿಂದ ಮಾತ್ರ ಸಮುದಾಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು ಎಂದು ಹಲವು ವರ್ಷಗಳ ಹಿಂದೆಯೇ ಹೇಳಿದ್ದರು. ಅವರ ದೂರದೃಷ್ಟಿ ಮೆಚ್ಚುವಂತದ್ದು ಎಂದು ಸ್ಮರಿಸಿದರು.

ಸರ್ಕಾರಿ ನೌಕರರ ಸಂಘದ ಸಹ ಕಾರ್ಯದರ್ಶಿ ಎ. ಸುಧೀರ್ ಮಾತನಾಡಿ, ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಸೇವಾಲಾಲ್ ಮಹಾರಾಜರು ಅನೇಕ ಪವಾಡಗಳ ಮೂಲಕ ಜನಮನ ಗೆದ್ದವರು. ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ ಜೀವನದುದ್ದಕ್ಕೂ ಬ್ರಹ್ಮಚರ್ಯ ಪಾಲನೆ ಮಾಡಿದವರು ಎಂದು ಹೇಳಿದರು.

ಸೇವಾಲಾಲ್‌ ಸಂತರು ಇಂದಿಗೂ ಕೂಡ ಜನ ಮಾನಸದಲ್ಲಿ ಗುರುವಿನ ಸ್ಥಾನ ಪಡೆದಿದ್ದಾರೆ. `ಸತ್ಯ, ಅಹಿಂಸೆ, ಕಳ್ಳತನ ಹಾಗೂ ವ್ಯಸನಕ್ಕೆ ದಾಸರಾಗಬೇಡಿ, ಕೆಟ್ಟದ್ದನ್ನು ಮಾಡಬೇಡಿ’ ಎಂಬ ಐದು ಪ್ರಮುಖ ತತ್ವಗಳನ್ನು ಹೇಳಿದ್ದಾರೆ. ಅವುಗಳನ್ನು ಪಾಲನೆ ಮಾಡಬೇಕು ಎಂದರು.

ಗ್ರಾ.ಪಂ ಅಧ್ಯಕ್ಷೆ ವಿ. ಸುಷ್ಮಾ ಮಾತನಾಡಿ, ಯುವಕರು ಗ್ರಾಮದಲ್ಲಿ ಸೇವಾಲಾಲ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ, ನಮ್ಮ ಒಗ್ಗಟ್ಟು ಇನ್ನಷ್ಟು ಗಟ್ಟಿಯಾಗಬೇಕಿದೆ, ಜತೆಗೆ ನಮ್ಮ ಸಮಾಜಕ್ಕೆ ಸೇವಾಲಾಲ್ ಒಬ್ಬರೇ ಜಗದ್ಗುರು. ಅವರ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ವೇಳೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಶ್ರೀಧರ್ ನಿಜಗುಳಿ, ರಮೇಶ್ ಹಳ್ಳಿ ಮಲ್ಲಾಪುರ, ಸಹಕಾರ ಸಂಘದ ಉಪಾಧ್ಯಕ್ಷ ರವಿಪ್ರಕಾಶ್, ಹಟ್ಟಿ ನಾಯಕ ಮಲ್ಲಿಕಾರ್ಜುನ್ ನಾಯ್ಡು ಕಾಮನಾಯ್ಕ (ಡಾವ್), ದಾಗಿಸ್ವಾಮಿನಾಯ್ಕ (ಕಾರ್ಬಾರಿ), ಗ್ರಾ.ಪಂ ಮಾಜಿ ಅಧ್ಯಕ್ಷ ಪಂಡರಿನಾಥ, ಕೆ.ಬಿ. ಹರೀಶ್, ಸಂತೋಷ್ ನಾಯ್ಕ, ಎಂ. ಅಭಿಲಾಷ್‌, ಲೋಹಿತ್ ಕುಮಾರ್, ರುದ್ರೇಶ್, ಸತೀಶ್, ತೇಜಸ್‌, ರಾಕೇಶ್, ಕಿರಣ್ ಹಾಗೂ ಸೇವಾಲಾಲ್ ಮಾಲಾಧಾರಿಗಳು ಇದ್ದರು.

error: Content is protected !!