ಬಾಡದ ಆನಂದರಾಜು, ಜಿ.ಎಸ್. ಶ್ಯಾಮ್‌ ಅವರಿಗೆ `ರಾಷ್ಟ್ರೀಯ ಪ್ರಜಾ ಸೇವೆ ರತ್ನ’ ಪ್ರಶಸ್ತಿ

ಬಾಡದ ಆನಂದರಾಜು, ಜಿ.ಎಸ್. ಶ್ಯಾಮ್‌ ಅವರಿಗೆ `ರಾಷ್ಟ್ರೀಯ ಪ್ರಜಾ ಸೇವೆ ರತ್ನ’ ಪ್ರಶಸ್ತಿ

ದಾವಣಗೆರೆ, ಫೆ. 19- ಗೋವಾದ ಕ್ವಾಲಂಗುಟೆ ಕನ್ನಡ ಸಂಘ, ಬೆಂಗಳೂರಿನ ಸಾಂತ್ವನ ಮ್ಯೂಸಿಕ್ ಅಂಡ್ ಚಾರಿಟೇಬಲ್ ಫೌಂಡೇಶನ್ ಇವರ ಜಂಟಿ ಆಶ್ರಯದಲ್ಲಿ ಕೊಡಮಾಡಲ್ಪಟ್ಟ `ರಾಷ್ಟ್ರೀಯ ಪ್ರಜಾ ಸೇವಾ ರತ್ನ’ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜು ಹಾಗೂ ಮಾಯಕೊಂಡದ ಬಿಜೆಪಿ ಯುವ ಮುಖಂಡ ಜಿ. ಎಸ್. ಶ್ಯಾಮ್ ಅವರಿಗೆ ಪ್ರದಾನ ಮಾಡಲಾಯಿತು.

ಗೋವಾ ಕನ್ನಡಿಗರ ಸಂಘ ಬ್ರಾಂಗಜಾ ಕ್ರೀಡಾಂಗಣದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆನಂದರಾಜ್‌ ಮತ್ತು ಶ್ಯಾಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರಕೆಳ ಹಾಜಬ್ಬ ಪ್ರದಾನ ಮಾಡಿದರು.

ಈ ವೇಳೆ ಮಾತನಾಡಿದ ಬಾಡದ ಆನಂದರಾಜು ಹಾಗೂ ಜಿ. ಎಸ್. ಶ್ಯಾಮ್, ತಮಗೆ ಪ್ರಶಸ್ತಿ ಲಭಿಸಿದ್ದು ಖುಷಿ ತಂದಿದೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅಭಿನಂದಿಸಿ, ಸನ್ಮಾನಿಸಿದ್ದು ಅರ್ಥಪೂರ್ಣ ಎನಿಸಿತು ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹರಕೆಗಳ ಹಾಜಬ್ಬ, ಮನುಷ್ಯನ ಮನುಷ್ಯತ್ವದ ಕಾರ್ಯಗಳನ್ನು ಜನರಾಗಲೀ ಸರ್ಕಾರವಾಗಲೀ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದರೆ, ಮಹತ್ವದ ಕಾರ್ಯಗಳನ್ನು ಮತ್ತಷ್ಟು ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ಮನಷ್ಯನಿಗೆ ಮತ್ತಷ್ಟು ಮನುಷ್ಯತ್ವ ಹೆಚ್ಚಿಸುವುದು ಈ ಪ್ರಶಸ್ತಿ ಪುರಸ್ಕಾರಗಳು ಮಾತ್ರ. ಹಾಗಾಗಿ ನನ್ನಂತಹ ಬಡವನ ಕಾರ್ಯವನ್ನು ಕೇಂದ್ರ ಸರ್ಕಾರ ಗಮನಿಸಿ, ಪದ್ಮಶ್ರೀ ಪ್ರಶಸ್ತಿ ಕೊಟ್ಟು ಪುರಸ್ಕರಿಸಿತು. ಈ ಪುರಸ್ಕಾರದಿಂದ ನನ್ನಂತಹ ಅದೆಷ್ಟೋ ಸಾಧಕರಿಗೆ ಬೆನ್ನು ತಟ್ಟಿದಂತಾಗಿದೆ.  ಇಂದಿನ ಪ್ರಶಸ್ತಿ ಪುರಸ್ಕೃತರುಗಳು ಸಮಾಜದ ಮುಖಿವಾಹಿನಿಗೆ ಬಂದು ಜನನಾಯಕರಾಗಲಿ ಎಂದು ಹಾಜಬ್ಬ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಗೋವಾ ಸರ್ಕಾರದ ಮಾಜಿ ಉಪಸಭಾಪತಿ ಹಾಗೂ ಶಾಸಕ ಮೈಕಲ್ ಲೋಬೋ, ಹೆಸರಾಂತ ಗಾಯಕಿ ಪವಿತ್ರಾ ರೆಡ್ಡಿ, ಗೋವಾ ಕನ್ನಡ ಸಂಘದ ರಾಜ್ಯಾಧ್ಯಕ್ಷ ಮುರುಳಿ ಮೋಹನ್ ಶೆಟ್ಟಿ, ಎ. ಎನ್. ಎನ್. ಮಾಧ್ಯಮ ವರದಿಗಾರ ಅನಿಲ್ ಸನದಿ, ಅಖಿಲ ಗೋವಾ ವೀರಶೈವ ಮಹಿಳಾ ರಾಜ್ಯಾಧ್ಯಕ್ಷರಾದ ಜಯಶೀಲಾ ಹೊಸಮನಿ ಮತ್ತಿತರರು ಹಾಜರಿದ್ದರು.

error: Content is protected !!