ಹರಿಹರ, ಫೆ. 18- ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು, ನಗರಸಭೆಯ ಆರೋಗ್ಯ ನಿರೀಕ್ಷಕರು ಮಂಗಳವಾರ ನಗರದ ಹೋಟೆಲ್ ಮತ್ತು ಬೇಕರಿ, ಫುಟ್‍ಪಾತ್‌ನಲ್ಲಿ ವ್ಯವಹರಿಸುತ್ತಿದ್ದ ಎಗ್‍ರೈಸ್ ಗೂಡಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ, ಕಳಪೆ ಗುಣಮಟ್ಟದ ಆಹಾರ ಉತ್ಪಾದಿಸಿ ಗ್ರಾಹಕರಿಗೆ ವಿತರಿಸುತ್ತಿದ್ದ ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದರು.
ಸರ್ಕಾರದ ಮಾರ್ಗಸೂಚಿ ಅನ್ವಯ ಕಡ್ಡಾಯವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ನಗರಸಭೆ ನೀಡುವ ಅಧಿಕೃತ ಪರವಾನಗಿ ಪತ್ರ ಪಡೆಯದೇ ಹೋಟೆಲ್, ಬೇಕರಿ ಮತ್ತಿತರೆ ಆಹಾರೋ ತ್ಪಾದನಾ ಘಟಕಗಳನ್ನು ಪ್ರಾರಂಭಿಸುವುದು ಅಪರಾಧವಾಗಿರುತ್ತದೆ ಎಂದು ತಿಳಿಸಿದರು.
ನಗರದ ಬಿರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿನ ತುಳಜಾ ಭವಾನಿ ಸಾವಜಿ ಹೋಟೆಲ್, ಸರೋವರ ಫ್ಯಾಮಿಲಿ ರೆಸ್ಟೋರೆಂಟ್, ಕೇಕ್ ಪ್ಯಾಲೇಸ್ ಬೇಕರಿ, ಜಯಶ್ರೀ ಚಿತ್ರ ಮಂದಿರದ ಎದುರಿನ ಫುಟ್‍ಪಾತ್‌ನಲ್ಲಿನ 3 ಎಗ್‍ರೈಸ್ ಗೂಡಂಗಡಿ, ಪಾನಿಪೂರಿ, ಕಬ್ಬಿನ ಹಾಲು ಮಾರುವ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅಲ್ಲಿ ತಯಾರಿಸುವ ಎಗ್‍ರೈಸ್, ಪಾನಿಪುರಿ, ಗೋಬಿ ಮಂಚೂರಿಗಳ ಗುಣಮಟ್ಟ ಪರಿಶೀಲಿಸಿದರು.
ತುಳಜಾ ಭವಾನಿ ಸಾವಜಿ ಹೋಟೆಲ್, ಸರೋವರ ಫ್ಯಾಮಿಲಿ ರೆಸ್ಟೋರೆಂಟ್, ಕೇಕ್ ಪ್ಯಾಲೇಸ್ ಬೇಕರಿ ಆಹಾರ ಉತ್ಪಾದನೆಗಾಗಿ ಬಳಸುತ್ತಿದ್ದ ಮಸಾಲ ಪದಾರ್ಥಗಳನ್ನು, ಚಿಕನ್, ಎಗ್, ಪಿಷ್‌ಗಳನ್ನು ಪರಿಶೀಲಿಸಿ. ಆಹಾರ ತಯಾರಿಸಲು ಬಳಸುವ ಕಚ್ಚಾ ಪದಾರ್ಥಗಳ ಪಾಕೆಟ್‍ಗಳ ಮೇಲೆ ಅವಧಿ ಮುಗಿದ ದಿನದ ಕಚ್ಚಾ ಪದಾರ್ಥಗಳನ್ನು ಕಂಡು ಬಂದ ಕಾರಣ ಹೋಟೆಲ್ ಮಾಲಿಕರಿಗೆ 7 ದಿನದೊಳಗಾಗಿ ಉತ್ತರಿಸಲು ಅಧಿಕಾರಿಗಳು ನೋಟಿಸ್ ನೀಡಿದರು.
ಆಹಾರ ಸುರಕ್ಷತೆ ಅಧಿಕಾರಿ ನವೀನ್‍ಕುಮಾರ್ ಆರ್, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರವಿಪ್ರಕಾಶ್ ಮಾತನಾಡಿ, ಈಗ ಬೇಸಿಗೆ ಕಾಲ ಆರಂಭಗೊಳ್ಳುತ್ತಿದ್ದು, ಗ್ರಾಹಕರಿಗೆ ಶುದ್ಧೀಕರಿಸಿದ ನೀರನ್ನು ವಿತರಿಸಬೇಕು. ಹೋಟೆಲ್, ಬೇಕರಿ ಮತ್ತಿತರೆ ಉದ್ಯಮಗಳ ಮಾಲೀಕರು ತಮ್ಮಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರುಗಳಿಗೆ ವೈದ್ಯಕೀಯ ತಪಾಸಣೆ, ಆಹಾರೋತ್ಪಾದನೆಯಲ್ಲಿ ಸ್ವಚ್ಛತೆ, ಕಾರ್ಮಿಕರ ವೈಯಕ್ತಿಕ ಸ್ವಚ್ಛತೆಯ ಕಡೆಗೆ ನಿತ್ಯ ಗಮನಿಸಬೇಕು. ಅವಧಿ ಮೀರಿದ ಆಹಾರ ಪದಾರ್ಥಗಳು ಕಂಡು ಬಂದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದೆಂದು
ಎಚ್ಚರಿಕೆ ನೀಡಿದರು. ನಗರಸಭೆಯ ಸಿಬ್ಬಂದಿಗಳು ಇದ್ದರು.