ಜಗಳೂರು, ಫೆ.18 – ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸ್ಥಿರ ಹಾಗೂ ಸಂಚಾರಿ ಬೀದಿಬದಿ ಚಿಲ್ಲರೆ ವ್ಯಾಪಾರಸ್ಥರ ಸಂಘದ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು, ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಧಿಕ್ಕಾರದ ಘೋಷಣೆ ಕೂಗುತ್ತಾ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಮಾತನಾಡಿ, 2014 ರ ಬೀದಿಬದಿ ವ್ಯಾಪಾರಸ್ಥರ ನಿಯಂತ್ರಣ ಹಾಗೂ ಸಂರಕ್ಷಣಾ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಬೀದಿ ಬದಿ ವ್ಯಾಪಾರಸ್ಥರಿಗೆ ಸ್ಮಾರ್ಟ್ ಕಾರ್ಡ್ ನೀಡಬೇಕು. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು, ಪಟ್ಟಣದ ಮಧ್ಯಭಾಗದಲ್ಲಿ ಮಾರುಕಟ್ಟೆ ಸ್ಥಾಪಿಸಬೇಕು. ಜಕಾತಿ ಹಣವನ್ನು ಪಟ್ಟಣ ಪಂಚಾಯಿತಿಯೇ ಪಡೆಯಬೇಕು. ವ್ಯಾಪಾರಸ್ಥರ ಸಂಖ್ಯೆಗೆ ಅನುಗುಣವಾಗಿ ಜಕಾತಿ ಮೊತ್ತವನ್ನು ನಿಯಂತ್ರಿಸಬೇಕು. ಜಕಾತಿ ಹಣ ಪಾವತಿಗೆ ರಸೀದಿ ನೀಡಬೇಕು ಎಂದು ಆಗ್ರಹ ಪಡಿಸಿದರು.
ಮಳಿಗೆ ಸಂಕೀರ್ಣದಲ್ಲಿ ವ್ಯಾಪಾರಸ್ಥರಿಗೆ ಶೌಚಾಲಯ, ಬೆಳಕಿನ ವ್ಯವಸ್ಥೆ, ಕುಡಿಯುವ ನೀರು ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕೆ. ಭಾರತಿ, ತಾಲ್ಲೂಕು ಅಧ್ಯಕ್ಷೆ ಮಂಜಮ್ಮ, ಪದಾಧಿಕಾರಿಗಳಾದ ತಿಪ್ಪಮ್ಮ, ಜಯ್ಯಣ್ಣ, ಎರ್ರಿಸ್ವಾಮಿ, ಕೃಷ್ಣಪ್ಪ, ಮೆಹಬೂಬ್ ಸಾಬ್, ಅನ್ವರ್, ಜಗದೀಶ್, ತಿಪ್ಪೇಸ್ವಾಮಿ ಸೇರಿದಂತೆ, ನೂರಾರು ಜನ ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದ್ದರು.