ರೈತರಿಗೆ ಕೃಷಿ ಇಲಾಖೆ ಸಲಹೆ
ದಾವಣಗೆರೆ,ಫೆ.18- ಜಿಲ್ಲೆಯಾದ್ಯಂತ ಪ್ರಸಕ್ತ ಬೇಸಿಗೆ ಹಂಗಾಮಿನ ಭತ್ತದ ನಾಟಿ ಕಾರ್ಯ ಪ್ರಾರಂಭವಾಗಿದ್ದು, ಗುಣಿಗಳ ಸಂಖ್ಯೆ ಮತ್ತು ನಾಟಿ ಅಂತರ ಹೆಚ್ಚು ಕಡಿಮೆಯಾದರೆ ಇಳುವರಿಯೂ ಹೆಚ್ಚು ಕಡಿಮೆಯಾಗುತ್ತದೆ. ಇದು ತಳಿಯ ಅವಧಿ ಹಾಗೂ ತೆಂಡೆಯೊಡೆಯುವ ಶಕ್ತಿ ಮತ್ತು ಮಣ್ಣಿನ ಫಲವತ್ತತೆ, ಮುಂತಾದ ಅಂಶಗಳನ್ನು ಅವಲಂಬಿಸಿರುತ್ತದೆ.
ಗುಣಿಗಳ ಸಂಖ್ಯೆ ಫಲವತ್ತತೆ ಹೆಚ್ಚಾಗಿರುವ ಭೂಮಿಯಲ್ಲಿ ಒಂದು ಗುಣಿಗೆ 2 ಪೈರುಗಳಂತೆ, ಫಲವತ್ತತೆ ಸಾಧಾರಣವಾಗಿದ್ದರೆ 2 ರಿಂದ 4 ಪೈರುಗಳನ್ನು ಪ್ರತಿ ಗುಣಿಗೆ 5 ಸೆಂ. ಮೀ. ಆಳಕ್ಕಿಂತ ಹೆಚ್ಚಾಗದಂತೆ ಸಸಿಗಳನ್ನು ನಾಟಿ ಮಾಡಬೇಕು.
ವಯಸ್ಸಾದ ಪೈರನ್ನು ನಾಟಿ ಮಾಡುವುದು ಅನಿವಾರ್ಯವಾದಾಗ ಮತ್ತು ಕ್ಷಾರಯುಕ್ತ ಮಣ್ಣಿನಲ್ಲಿ ನಾಟಿ ಮಾಡುವಾಗ ಸಾಧಾರಣವಾಗಿ ನಾಟಿ ಮಾಡುವುದಕ್ಕಿಂತ ಹೆಚ್ಚು ಸಾಂದ್ರತೆಯಲ್ಲಿ ಅಂದರೆ 4 ರಿಂದ 5 ಸಸಿಗಳನ್ನು ಒಂದು ಗುಣಿಗೆ 5 ಸೆಂ. ಮೀ. ಆಳಕ್ಕಿಂತ ಹೆಚ್ಚಾಗದಂತೆ ಸಸಿಗಳನ್ನು ನಾಟಿ ಮಾಡಬೇಕು. ಹೀಗೆ ನಾಟಿ ಮಾಡುವುದರಿಂದ ಇಳುವರಿ ಕುಗ್ಗುವುದನ್ನು ಕನಿಷ್ಠ ಮಟ್ಟಕ್ಕೆ ಇಳಿಸಬಹುದು.
ನಾಟಿಯ ಅಂತರ: ದೀರ್ಘಾವಧಿ ಹಾಗೂ ಮಧ್ಯಮಾವಧಿ ತಳಿಗಳಲ್ಲಿ ಸಾಲಿನಿಂದ ಸಾಲಿಗೆ 20 ಸೆಂ. ಮೀ. ಹಾಗೂ ಗಿಡದಿಂದ ಗಿಡಕ್ಕೆ 10 ಸೆಂ. ಮೀ. ಅಂತರದಲ್ಲಿ ಪ್ರತಿ ಚದರ ಮೀಟರ್ ಪ್ರದೇಶಕ್ಕೆ 45 ರಿಂದ 50 ಗುಣಿಗಳು ಬರುವಂತೆ ನಾಟಿ ಮಾಡಬೇಕು. ಕಡಿಮೆ ಅವಧಿ ತಳಿಗಳಲ್ಲಿ ತೆಂಡೆಯೊಡೆಯುವ ಶಕ್ತಿ ಕಡಿಮೆಯಿರುವುದರಿಂದ ಹೆಚ್ಚು ಸಾಂದ್ರತೆಯಲ್ಲಿ ಅಂದರೆ ಸಾಲಿನಿಂದ ಸಾಲಿಗೆ 15 ಸೆಂ. ಮೀ. ಹಾಗೂ ಗಿಡದಿಂದ ಗಿಡಕ್ಕೆ 10 ಸೆಂ. ಮೀ. ಅಂತರದಲ್ಲಿ ಪ್ರತಿ ಚದರ ಮೀಟರ್ ಪ್ರದೇಶಕ್ಕೆ 65 ರಿಂದ 68 ಗುಣಿಗಳು ಬರುವಂತೆ ನಾಟಿ ಮಾಡಬೇಕು.
ಯಂತ್ರಚಾಲಿತ ನಾಟಿ, ಕೂರಿಗೆ ಬಿತ್ತನೆಯಿಂದ ಕೃಷಿ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡ ಬಹುದಾಗಿ ರುವುದರಿಂದ ತಮ್ಮ ತಮ್ಮ ರೈತರನ್ನು ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇ ಶಕರ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆ ಯುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.