ಮಲೇಬೆನ್ನೂರು, ಫೆ.7- ಸರ್ಕಾರಿ ಬಸ್ ಸೌಲಭ್ಯ ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿತ್ತು. ಹೋಬಳಿ ಕೇಂದ್ರವಾದ ಮಲೇಬೆನ್ನೂರಿಗೆ ಜನಸಾಮಾನ್ಯರು ಒಂದಿಲ್ಲೊಂದು ಕೆಲಸ ಕಾರ್ಯಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಅವರು ನಂದಿಗುಡಿಯಲ್ಲಿ ಉಕ್ಕಡಗಾತ್ರಿಯಿಂದ ನಂದಿಗುಡಿ, ಗೋವಿನಹಾಳ್, ಕೊಕ್ಕನೂರು, ಜಿ. ಬೇವಿನಹಳ್ಳಿ ಮಾರ್ಗವಾಗಿ ಮಲೇಬೆನ್ನೂರಿಗೆ ಮತ್ತೆ ಅದೇ ಮಾರ್ಗದಲ್ಲಿ ವಾಪಾಸ್ ಉಕ್ಕಡಗಾತ್ರಿಗೆ ತೆರಳುವ ಕೆಎಸ್ಆರ್ಟಿಸಿ ನೂತನ ಬಸ್ ಮಾರ್ಗಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಬಸ್ ಸೌಲಭ್ಯದಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್ ತಿಳಿಸಿದರು.
ವಾಸನ, ಕಡರನಾಯ್ಕನಹಳ್ಳಿ, ಹೊಳೆಸಿರಿಗೆರೆ, ಭಾನುವಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೋಬಳಿ ಕೇಂದ್ರವಾದ ಮಲೇಬೆನ್ನೂರಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ. ಎಕ್ಕೆಗೊಂದಿ ಬಳಿ ಶಿವಮೊಗ್ಗ ಕಡೆಗೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳು ನಿಲುಗಡೆ ಮಾಡುವ ವ್ಯವಸ್ಥೆ ಮಾಡಬೇಕು. ಮಣಿಪಾಲ, ಮಂಗಳೂರು, ಬೆಂಗಳೂರು ಮುಂತಾದ ಕಡೆಗಳಿಗೆ ರೋಗಿಗಳು ಪ್ರಯಾಣಿಸಲು ಹರಿಹರಕ್ಕೆ ಹೋಗಿ ಬಸ್ ಹತ್ತಬೇಕಾದ ಪರಿಸ್ಥಿತಿ ಇದೆ. ರಾತ್ರಿ ಪೂರ್ತಿ ಹರಿಹರದ ಬಸ್ ಸ್ಟ್ಯಾಂಡ್ ನಲ್ಲಿ ಕಾಲಕಳೆದು ಬೆಳಿಗ್ಗೆ ಊರಿಗೆ ಬರಬೇಕಾಗಿದೆ. ಇಂತಹ ನಿಕೃಷ್ಟ ಪರಿಸ್ಥಿತಿಯನ್ನು ಪರಿಹರಿಸುವಂತೆ ಜನರು ಶಾಸಕ ಹರೀಶ್ ಅವರನ್ನು ಒತ್ತಾಯಿಸಿದರು. ಈ ಬಗ್ಗೆ ಅಧಿಕಾರಿ ಗಳ ಜೊತೆ ಚರ್ಚಿಸಿ ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ಶಾಸಕರು ಭರವಸೆ ನೀಡಿದರು.
ತಾಲ್ಲೂಕು ಗ್ರಾಮಾಂತರ ಬಿಜೆಪಿ ಕಾರ್ಯದರ್ಶಿ ಹುಗ್ಗಿ ಮಹಾಂತೇಶ್, ಉಕ್ಕಡಗಾತ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರೇಗೌಡ, ಸದಸ್ಯ ಕೆಂಚವೀರಯ್ಯ, ಶ್ರೀಕಾಂತ್, ಕಡರನಾಯ್ಕನಹಳ್ಳಿ ಮಂಜಣ್ಣ, ಅರುಣ್, ಸಿದ್ದಯ್ಯ, ಹಾಲಸ್ವಾಮಿ ಮತ್ತಿತರರು ಈ ವೇಳೆ ಇದ್ದರು.