ನ್ಯಾಮತಿ, ಫೆ.7- ತಾಲ್ಲೂಕಿನ ದೊಡ್ಡೇರಿಯ ಜ್ಞಾನವಾಹಿನಿ ಶಾಲಾ ಸಂಸ್ಥೆಯು ಪ್ರಾರಂಭವಾಗಿ 25 ವರ್ಷಗಳಾದ ಪ್ರಯುಕ್ತ ಫೆ.8ರ ಶನಿವಾರ ಸಂಜೆ 4.30ಕ್ಕೆ ಜ್ಞಾನವಾಹಿನಿ ಕಲಾಮಂದಿರದಲ್ಲಿ 25ನೇ ವರ್ಷದ ಸಂಭ್ರಮಾಚರಣೆ ನಡೆಯಲಿದೆ ಎಂದು ಶಾಲಾ ಕಾರ್ಯದರ್ಶಿ ಡಿ.ಎ. ರವಿಶಂಕರ್ ತಿಳಿಸಿದರು.
ದೊಡ್ಡೇರಿಯ ಜ್ಞಾನವಾಹಿನಿ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಭ್ರಮಾಚರಣೆಗೆ ಭಾರತ ಸರ್ಕಾರ ದೆಹಲಿಯ ಲೋಕಪಾಲ್ ಮತ್ತು ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಾಧೀಶರಾದ ಎಲ್.ನಾರಾಯಣ ಸ್ವಾಮಿ ಆಗಮಿಸಲಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಗಮನದ ಲ್ಲಿರಿಸಿ ಕೊಂಡು ಶಾಲೆಯನ್ನು ಸಂಪೂರ್ಣ ಡಿಜಿಲೀಕರಣಗೊಳಿಸಿದ್ದು, ಡಿಜಿಲೀಕರಣವನ್ನು ಲೋಕಪಾಲ್ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಲೋಕಪಾಲ್ ಅವರು, ಪೋಷಕರು ಮತ್ತು ಮಕ್ಕಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ತದನಂತರ ಅವರಿಗೆ ನಾಗರೀಕ ಸನ್ಮಾನ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.
ಶಾಸಕ ಡಿ.ಜಿ. ಶಾಂತನಗೌಡ, ದಾವಣ ಗೆರೆಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ಜೆಎಂಎಫ್ಸಿ ಸಿವಿಲ್ ನ್ಯಾಯಾಧೀಶರಾದ ಎಚ್. ದೇವದಾಸ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಸ್.ಎನ್.ಪುಣ್ಯಕೋಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಗೋಷ್ಠಿಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಎಚ್. ಹೇಮಾವತಿ, ಶಿಕ್ಷಣ ಸಂಯೋಜಕಿ ಎಸ್.ಜಿ. ಶಾಂತಾ, ವಿಶೇಷ ಸಂಪನ್ಮೂಲ ಅಧಿಕಾರಿ ಕೆ.ಎಂ. ಅಣ್ಣಪ್ಪ ಮತ್ತು ಶಾಲೆಯ ಸಿಬ್ಬಂದಿ ಇದ್ದರು.