ರಾಣೇಬೆನ್ನೂರು, ಫೆ.6- ನಾಡಿದ್ದು ದಿನಾಂಕ 8 ರಿಂದ 10 ರವರೆಗೆ ತಾಲ್ಲೂಕಿನ ಐರಣಿ ಹೊಳೆಮಠದ ನೂತನ ಸ್ವಾಮೀಜಿ ಪಟ್ಟಾಭಿಷೇಕ, ತುಲಾಭಾರ, ಧರ್ಮಸಭೆ ಸಮಾರಂಭವು ನಾಡಿನ ಹರ, ಗುರು, ಚರ ಮೂರ್ತಿಗಳ ಸಾನ್ನಿಧ್ಯ ಹಾಗೂ ಗಣ್ಯರ ಭಾಗವಹಿಸುವಿಕೆಯಲ್ಲಿ ನಡೆಯಲಿದೆ.
8 ಮತ್ತು 9 ರಂದು ಸನ್ಯಾಸ ದೀಕ್ಷೆ ನಂತರ ಬಸವರಾಜ ಶ್ರೀಗಳ 75ನೇ ವರ್ಷದ ಸ್ಮರಣೆಗೆ 75 ಭಕ್ತರಿಂದ ನಾಣ್ಯಗಳ ತುಲಾಭಾರ, ಅಖಂಡ ಶಿವ ಭಜನೆ, ಶ್ರೀ ಸಿದ್ಧಾರೂಢರ ಜ್ಯೋತಿ ರಥಯಾತ್ರೆಯ ಸ್ವಾಗತ, ಸಂಜೆ ಧರ್ಮಸಭೆ ನಡೆಯಲಿದೆ.
ದಿನಾಂಕ 10 ರಂದು ಬೆಳಿಗ್ಗೆ ನೂತನ ಶ್ರೀ ಸಿದ್ದಾರೂಢ ಸ್ವಾಮಿಗಳ ಪಟ್ಟಾಭಿಷೇಕವು ಜೋಡಕುರಳಿ ಚಿದ್ಭವಾನಂದ ಭಾರತೀ ಸ್ವಾಮೀಜಿ ಹಾಗೂ ದಾವಣಗೆರೆ ಜಡೆ ಸಿದ್ದಾಶ್ರಮದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ.
ನಂತರ ನಡೆಯುವ ಧರ್ಮಸಭೆಯನ್ನು ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸುವರು.
ಇಂಚಲ ಶಿವಾನಂದ ಭಾರತಿ ಶ್ರೀಗಳು, ಬೀದರ ಶಿವಕುಮಾರ ಶ್ರೀಗಳು, ವಿಜಯಪುರ ಸಿದ್ದಾರೂಢ ಶ್ರೀ ಗಳು, ಕಾಗಿನೆಲೆ ನಿರಂಜನಾನಂದ ಪುರಿ ಶ್ರೀಗಳು, ರಾಜನಹಳ್ಳಿ
ಪ್ರಸನ್ನಾನಂದ ಶ್ರೀಗಳು, ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು, ಹಂಪಿ ಗಾಯತ್ರಿ ಪೀಠದ ದಯಾನಂದ ಶ್ರೀಗಳು, ಹರಿಹರ ವಚನಾನಂದ ಶ್ರೀ ಗಳು, ಶಾಂತಭೀಷ್ಮ ಶ್ರೀಗಳು, ನಗರದ ಮಲ್ಲಯ್ಯ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಪಾಲ್ಗೊಳ್ಳುವರು.
ಉಪಸಭಾಪತಿ ರುದ್ರಪ್ಪ ಲಮಾಣಿ, ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀ ನಿವಾಸ ಮಾನೆ, ಬಿ.ಪಿ ಹರೀಶ್, ಯಾಶೀರ್ ಖಾನ್ ಪಠಾಣ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ಮಾಜಿ ಮಂತ್ರಿ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಮುಖಂಡ ಸೀತಾರಾಮರೆಡ್ಡಿ, ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ ಮತ್ತಿತರರು ಭಾಗವಹಿಸುವರು.