ಜಗತ್ತಿನಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಕನ್ನಡವೂ ಒಂದು

ಜಗತ್ತಿನಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಕನ್ನಡವೂ ಒಂದು

ಹರಪನಹಳ್ಳಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ

ಹರಪನಹಳ್ಳಿ, ಫೆ. 6- ಜಗತ್ತಿನಲ್ಲಿ ಹೆಚ್ಚು ಜನರು ಮಾತನಾಡುವ ಭಾಷೆಗಳಲ್ಲಿ ಕನ್ನಡವು ಪ್ರಮುಖವಾದುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು  ತಾಲ್ಲೂಕು ಘಟಕದ ವತಿಯಿಂದ  ಹಮ್ಮಿಕೊಂಡಿದ್ದ ದಿ.ಕಂಚಿಕೇರಿ ಬಿದ್ರಿ ಸಿದ್ದಪ್ಪ ವೀರಮ್ಮ ಸ್ಮಾರಕ ದತ್ತಿ,   ದಿ.ಕೊಟ್ರಪ್ಪ  ಶ್ರೀಮತಿ ಹೆಚ್ ಬಸಮ್ಮ ದತ್ತಿ, ಕಂಚಿಕೇರಿ  ಶ್ರೀಮತಿ ಬಿದರಿ ಮೀನಾಕ್ಷಮ್ಮ ರೇವಣಸಿದ್ದಪ್ಪ ದತ್ತಿ,    ಕೆ.ಎಂ.ಗುರುಸಿದ್ದಯ್ಯ ಮತ್ತು   ಕೆ.ಎಂ.ಗಿರಿಜಮ್ಮ ಜ್ಞಾಪಕಾರ್ಥ  ದತ್ತಿ  ಉದ್ಘಾಟಿಸಿ  ಅವರು ಮಾತನಾಡಿದರು.

ಸಂಪದ್ಭರಿತವಾದ ಕರುನಾಡು ಸಾಹಿತ್ಯ, ಕಲೆ, ಸಂಸ್ಕೃತಿ ಕ್ಷೇತ್ರದಲ್ಲಿ ಉನ್ನತ ಪರಂಪರೆಯನ್ನು ಹೊಂದಿದೆ. ಸಮೃದ್ಧ ಕನ್ನಡನಾಡು ಸರಿಸಾಟಿಯಿಲ್ಲದಷ್ಟು ಸಂಪತ್ಭರಿತವಾಗಿದೆ. ನದಿ, ಖನಿಜ, ಬೆಟ್ಟ ಗುಡ್ಡ, ಸುಂದರ ಕಾನನ, ಸಾಗರದಂಚು, ಕೆರೆಕಟ್ಟೆಗಳು, ಜಲಾಶಯಗಳು, ಸುಂದರ ಹಾಗೂ ಮನಮೋಹಕ ಪ್ರವಾಸಿ ತಾಣಗಳು, ಗುಡಿಗೋಪುರಗಳ ಶ್ರೀಮಂತಿಕೆಯನ್ನು ಹೊಂದಿದೆ. ಕಾಯಕ ಎಂದಾಕ್ಷಣ ನಮ್ಮ ಮುಂದೆ ಬಸವಣ್ಣನವರು ನೆನಪಿಗೆ ಬರುತ್ತಾರೆ. ಮಾದಾರ ಚನ್ನಯ್ಯ, ಅಂಬಿಗರ ಚೌಡಯ್ಯನಂತಹ ಮಹಾ ಶರಣರು  ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸಮಾಜವನ್ನು ಎಚ್ಚರಿಸಿದರು ಎಂದರು.

ಅರಸಿಕೇರಿಯ ಉಪನ್ಯಾಸಕ ಡಾ.ಹಾದಿಮನಿ ರಮೇಶ `ಕಾಯಕ ಮತ್ತು ಧರ್ಮ, ವೈಚಾರಿಕತೆ ಮತ್ತು ಧರ್ಮ’ ಕುರಿತು ಮಾತನಾಡಿ,    ಬದುಕಿಗಾಗಿ ಕಾಯಕ ಮಾಡಲೇಬೇಕು,  ವೃತ್ತಿಯೇ ಕಾಯಕ, ಅದರಲ್ಲಿ ಮೇಲು-ಕೀಳೆಂಬುದಿಲ್ಲ.  ಧರ್ಮ ಎಂದರೆ ಕಾರ್ಯ ಮಾಡುವುದು. ಬಿದ್ದವರು, ಬೀಳುತ್ತಿರುವ ರನ್ನು ಮೇಲೆತ್ತುವುದು. 

ಶರಣರ ದೃಷ್ಟಿಯಲ್ಲಿ ಭವಿ ಮತ್ತು ಭಕ್ತ ಎನ್ನುವ ಎರಡು ಜಾತಿಗಳಿವೆ. ಆದರೆ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮನು ಕುಲವನ್ನು ಪ್ರತ್ಯೇಕಿಸುವ ಮೂಲಕ ಶರಣರ ವೈಚಾರಿಕ ತತ್ವ ವನ್ನು ಮರೆಮಾಚುವ ಹುನ್ನಾರ ನಡೆದಿದೆ ಎಂದರು.

ದತ್ತಿ ದಾನಿ ಕನ್ನಡ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ ಮಾತನಾಡಿ,  ಮಹಾರಾಜ  ಶ್ರೀ ಕೃಷ್ಣರಾಜ ಒಡೆಯರ್ ಅವರು 107 ವರ್ಷಗಳ ಹಿಂದೆ 1914 ಮೇ 5   ಬುಧವಾರ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಹಾಗೂ ಎಲ್ಲ ಕನ್ನಡಪರ ಸಂಸ್ಥೆಗಳಿಗೆ ಮಾತೃ ಸಂಸ್ಥೆಯಾಗಿ ಪ್ರಾರಂಭದಿಂದಲೂ ಕನ್ನಡ-ಕನ್ನಡಿಗ-ಕರ್ನಾಟಕದ ಸೇವೆಗೆ ಕಂಕಣಬದ್ಧವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಿ.ರಾಮನಮಲಿ ಮಾತನಾಡಿ,  ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಸದುದ್ಧೇಶದಿಂದ ಶಾಲಾ-ಕಾಲೇಜು ಗಳಲ್ಲಿ ದತ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನ್ಯ ಭಾಷೆಗಳ ಪ್ರಭಾವ ದಿಂದಾಗಿ ಕನ್ನಡ ಭಾಷೆಗೆ ದಕ್ಕೆ ಬಂದಿದೆ. ಮೂಲ ಕನ್ನಡ ಭಾಷೆಯಲ್ಲಿರುವ ಪದಗಳು ಸಾಕಷ್ಟು ಬದಲಾವಣೆಗಳು ಆಗಿವೆ. ಕನ್ನಡದಲ್ಲಿ ಇಂಗ್ಲಿಷ್ ಭಾಷೆ ಬೆರೆತಿದೆ. ಪ್ರತಿ ನಲವತ್ತು ಕಿ.ಮಿಗೆ ಒಂದು ಭಾಷೆ, ಸಂಸ್ಕೃತಿ ಸಂಪ್ರದಾಯವಿದೆ ಎಂದರು.

ಕಾರ್ಯಕ್ರಮದಲ್ಲಿ   ಸಾಹಿತಿ  ಇಸ್ಮಾಯಿಲ್ ಎಲಿಗಾರ್, ಸರ್ಕಾರಿ ಪದವಿ ಪೂರ್ವ ಕಾಲೇಜು ಮುಖ್ಯ ಶಿಕ್ಷಕರಾದ ಎಂ.ಮಮ್ತಾಜ್, ಕನ್ನಡ ಸಾಹಿತ್ಯ ಪರಿಷತ್ತು   ತಾಲೂಕು ಘಟಕದ ಗೌರವ ಕಾರ್ಯ ದರ್ಶಿ ಜಿ.ಮಹಾದೇವಪ್ಪ. ಕಾರ್ಯಕಾರಿ ಸಮಿತಿ ಸದಸ್ಯ ಎ. ಜಾವೀದ್, ಶಿಕ್ಷಕರಾದ ವಿಠೋಬ ಎಸ್.ಎಚ್, ಪಂಪನಾಯ್ಕ, ಜಿ.ದೇವರಾಜ, ಲತಾ ಎಂ.ರಾಠೋಡ್, ಎ.ಲಕ್ಯಾನಾಯ್ಕ ಸೇರಿದಂತೆ ಇತರರು ಇದ್ದರು.

error: Content is protected !!